ಗಜೇಂದ್ರಗಡ: ಮಹಿಳೆಯರ ಕೊಡುಗೆ, ಸಾಧನೆ ಪರಿಚಯಿಸುವುದರ ಜತೆಗೆ ಶಿಕ್ಷಣ, ರಾಜಕೀಯ, ಕೃಷಿ ಸೇರಿ ಪ್ರಮುಖ ಅಂಶಗಳ ಜಾಗೃತಿ ಮೂಡಿಸುವ ಕಾರ್ಯವನ್ನು ಅಕ್ಕನ ಬಳಗ ಕಳೆದ ೮ ವರ್ಷದಿಂದ ಮಾಡುತ್ತಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ಎಂದು ಸಂಯುಕ್ತಾ ಬಂಡಿ ತಿಳಿಸಿದರು.
ಇಲ್ಲಿನ ಅಕ್ಕನ ಬಳಗದ ಕಾರ್ಯಾಲಯದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಕನ ಬಳಗದ ೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಅವಕಾಶ ಎಂಬುದು ಎಲ್ಲರಿಗೂ ಸಿಗುತ್ತದೆ. ಆದರೆ ಸಿಕ್ಕ ಅವಕಾಶವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದು ಪುರುಷ ಪ್ರಧಾನ ಸಮಾಜಕ್ಕೆ ಒಲಿದಿದೆ. ಆದರೆ ಮಹಿಳೆಯರಿಗೆ ಸಿಗುವ ಅವಕಾಶವನ್ನು ಹೇಗೆ ತಪ್ಪಿಸಬೇಕು ಎನ್ನುವ ತಂತ್ರಗಾರಿಕೆ ನಡೆಯುತ್ತಿದೆ ಎಂಬುದು ಮುಚ್ಚಿಡದ ಸತ್ಯವಾಗಿದೆ. ಇಂತಹ ಎಲ್ಲ ತಂತ್ರಗಳನ್ನು ನೆಲಗೆಡವಿ ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆಯ ಛಾಪು ಮೂಡಿಸಿದ್ದಾರೆ ಎಂದರು.ಮಹಿಳೆಯರು ಕುಟುಂಬದ ಜವಾಬ್ದಾರಿ ನೆರವೇರಿಸುವುದರ ಜತೆಗೆ ದೇಶದ ಉನ್ನತ ಸ್ಥಾನವನ್ನು ಸಹ ಅಲಂಕರಿಸಿದ್ದಾರೆ. ಹೀಗಾಗಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ನಮಗಿರುವ ಅವಕಾಶಗಳನ್ನು ಪಡೆಯುವ ದೆಸೆಯಲ್ಲಿ ಅಕ್ಕನ ಬಳಗವು ಮಹಿಳೆಯರ ನೋವು, ನಲಿವು ಆಲಿಸುತ್ತಾ ಮಹಿಳೆಯರ ಸಂಘಟನೆಯನ್ನು ಮಾಡುತ್ತಿದೆ ಎಂದರು.ಪತ್ರಿಬಸವೇಶ್ವರ ಅನುಭವ ಮಂಟಪ ಅಧ್ಯಕ್ಷೆ ಪ್ರೇಮಾ ಅಂಗಡಿ ಮಾತನಾಡಿ, ಮಹಿಳೆಯರಿಗೆ ಸಮಾನ ಸ್ವಾತಂತ್ರ್ಯ ಸಿಗಬೇಕು. ಅವಳು ಎಲ್ಲರಂತೆ ಸಮಾನಳು ಎಂದು ನಡೆದ ಚಳವಳಿ, ಕ್ರಾಂತಿ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಅಕ್ಕಮಹಾದೇವಿ ಹಾಗೂ ಬಸವಣ್ಣನವರು ಸೇರಿ ಅನೇಕ ಬಸವಾದಿ ಪ್ರಮಥರ ಆಶಯವಾಗಿತ್ತು ಎಂದ ಅವರು, ಸಂಸ್ಕಾರ ಎಂಬುದು ದೇಶದ ಸಮಾನಾರ್ಥಕ ಪದವಾಗಿದೆ. ಹೀಗಾಗಿ ಮಹಿಳೆಯರು ಸಂಸ್ಕಾರ ಬಿಟ್ಟು ಸಾಧನೆ ಮಾಡಿದರೆ ಅದಕ್ಕೆ ಅರ್ಥವಿಲ್ಲ. ಸಂಸ್ಕಾರದೊಂದಿಗೆ ಸಾಧನೆ ಮಾಡಿದರೆ ಜೀವನಕ್ಕೆ ಹಾಗೂ ಸಾಧನೆಗೆ ಅರ್ಥ ಬರಲಿದೆ ಎಂದರು.ಮಹಿಳಾ ಆರಕ್ಷಕರಾದ ಮಾಲತಿ ಶಿಗಿಹಳ್ಳಿ, ಮಂಜುಳಾ ಕೌಜಗೇರಿ, ಭಾಗ್ಯ ಆಲೂರ, ಲಕ್ಷ್ಮೀ ದೊಡ್ಡಮನಿ, ರಜೀಯಾ ಬನ್ನಿಗೋಳ ಅವರನ್ನು ಸನ್ಮಾನಿಸಿದ ಬಳಿಕ ಅರುಣೋದಯ ಕಲಾ ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.ಈ ವೇಳೆ ಸುವರ್ಣಾ ನಂದಿಹಾಳ, ಬಸಮ್ಮ ಸಾಲಿಮಠ, ರಾಜಮ್ಮ ಹೂಲಿ, ಗೀತಾ ಕಂಬಳ್ಯಾಳ, ಲೀಲಾ ಸವಣೂರ, ವಿಜಯಲಕ್ಷ್ಮಿ ಚಟ್ಟೇರ, ಸುಜಾತಾ ಮೆಣಸಗಿ, ರಾಜೇಶ್ವರಿ ಅರಹುಣಸಿ, ರೇಖಾ ವೀರಾಪೂರ, ಸುಕನ್ಯಾ ಹೊಗರಿ, ಸುಜಾತಾ ಅಪ್ಪಣವರ, ವನಿತಾ ಘಾಟಗೆ, ರಶ್ಮಿ ಸಜ್ಜನ, ಮಂಜುಳಾ ಕೋರಧಾನ್ಯಮಠ, ಸುಮಾ ಲಕ್ಕುಂಡಿಮಠ, ಕೀರ್ತಿ ಕೊಟಗಿ, ಶಿವಲೀಲಾ ಸಿಂಹಾಸನ, ಸುಜಾತ ಮುದಗಲ್, ಸಂಗೀತಾ ಗಾಣಗೇರ ಸೇರಿ ಇತರರು ಇದ್ದರು.