ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯ: ಮಂಠಾಳೆ

| Published : Mar 23 2024, 01:12 AM IST

ಸಾರಾಂಶ

ಬಸವಕಲ್ಯಾಣದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚಾರಣೆಯಲ್ಲಿ ಪ್ರೊ.ವಿಜಯಲಕ್ಷ್ಮಿ ಗಡ್ಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ದೇಶದ ಪ್ರತಿ ರಂಗದಲ್ಲಿ ಇಂದು ಮಹಿಳೆ ಪ್ರವೇಶ ಮಾಡಿದ್ದಾಳೆ. ಜನ ಸಂಖ್ಯೆ ಅರ್ಧದಷ್ಟಿರುವ ಮಹಿಳೆಯರು ಶಿಕ್ಷಣ, ಆರೋಗ್ಯ ಸರ್ಕಾರಿ ಹುದ್ದೆ, ದೇಶದ ಅತ್ಯುನತ ಹುದ್ದೆಗಳಾದ ಐಎಎಸ್, ಐಪಿಎಸ್, ಸೈನ್ಯೆ ವಿಜ್ಞಾನ ಮುಂತಾದ ಕಡೆ ಮಹಿಳೆಯರು ತುಂಬಾ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಮಹಿಳೆಯರ ಅಭಿವೃದ್ಧಿಯಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯವೆಂದು ಸ್ತ್ರೀರೋಗ ತಜ್ಞೆ ಡಾ.ಪ್ರಿಯಂಕಾ ಮಂಠಾಳೆ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಮಹಿಳಾ ದಿನಾಚಾರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕಡೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡಬೇಕು. ಅಂದಾಗ ಮಾತ್ರ ದೇಶದ ಪ್ರತಿರಂಗದಲ್ಲಿ ಪ್ರವೇಶ ಮಾಡಲು ಸಾಧ್ಯವಾಗುತ್ತದೆ ಎಂದರು.

ಭಾಲ್ಕಿ ಸಿ.ಬಿ ಕಾಲೇಜಿನ ಉಪನ್ಯಾಸಕಿ ಹಾಗೂ ಜಿಲ್ಲಾ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮಿ ಗಡ್ಡೆ ಮಾತನಾಡಿ, ಮಹಿಳೆಯರು ಉದ್ಯೋಗ, ಶಿಕ್ಷಣ ಪಡೆದರು ಸಹ ಅನೇಕ ಸಂದರ್ಭಗಳಲ್ಲಿ ಕಿರುಕುಳ, ಬಲತ್ಕಾರ, ಅಸಮಾನತೆಯನ್ನು ಎದುರಿಸಬೇಕಾಗಿದೆ. ಕೌಟುಂಬಿಕ ಕಲಹಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಇದನ್ನು ತಡೆಗಟ್ಟುವಲ್ಲಿ ಅನೇಕ ಕಾಯ್ದೆ ಕಾನೂನುಗಳನ್ನು ರಚಿಸಿದೆ ಅದರ ಸದುಪಯೋಗ ಪಡೆದುಕೊಳ್ಳಲು ಮಹಿಳೆಯರು ವಿದ್ಯಾವಂತರಾಗಲು ಮುಂದೆ ಬರಬೇಕು ಮತ್ತು ಸಂಘಟಿತರಾಗಿ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಬಳಿರಾಮ ಹುಡೆ ಮಾತನಾಡಿ, ಒಂದು ಕಡೆ ಮಹಿಳೆ ದೇಶದ ಸರ್ವಸಮಾಜದ ಸರ್ವಾಂಗೀಣ ಶಕ್ತಿಯಾಗಿದ್ದಾರೆ. ಅನೇಕ ರಂಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಪ್ರತಿರಂಗದಲ್ಲೂ ಮಹಿಳೆ ಮುಂದುವರೆಯುತಿದ್ದಾರೆ ಎಂಬ ಸಂತೋಷವಿದ್ದರೆ ಇನ್ನು ಅನೇಕ ವಿಷಯಗಳಲ್ಲಿ ಮಹಿಳೆ ಕಿರುಕುಳ ಅನುಭವಿಸುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರೊ.ಪುಷ್ಪಾಬಾಯಿ ಕೊರೆ ಸ್ವಾಗತಿಸಿದರೆ ಡಾ.ಶ್ರೀಕಾಂತ ಚವ್ಹಾಣ ನಿರೂಪಿಸಿದರು ಜ್ಯೋತಿ ವಂದಿಸಿದರು.