ಮಹಿಳೆಯರ ಸುರಕ್ಷಿತ ಸಂಚಾರ, ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶದ ಕನಸು ಹೊತ್ತು ಹು-ಧಾ ಮಹಾನಗರ ಪಾಲಿಕೆ ರೂಪಿಸಿದ ಪಿಂಕ್ ಆಟೋ ಯೋಜನೆಗೆ ನಾರಿಯರಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿದೆ.
- ₹4.10 ಕೋಟಿ ಮೀಸಲಿಟ್ಟರೂ ಯೋಜನೆಗೆ ಸಿಗದ ವೇಗ
- 8-9 ತಿಂಗಳಿಗೆ ಬಂದಿದ್ದು ಕೇವಲ 9 ಅರ್ಜಿ- 82 ವಾರ್ಡ್ಗಳಿಗೆ ತಲಾ ಒಂದರಂತೆ ಆಟೋ ವಿತರಿಸುವ ಗುರಿಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಮಹಿಳೆಯರ ಸುರಕ್ಷಿತ ಸಂಚಾರ, ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶದ ಕನಸು ಹೊತ್ತು ಹು-ಧಾ ಮಹಾನಗರ ಪಾಲಿಕೆ ರೂಪಿಸಿದ ಪಿಂಕ್ ಆಟೋ ಯೋಜನೆಗೆ ನಾರಿಯರಿಂದಲೇ ನಿರಾಸಕ್ತಿ ವ್ಯಕ್ತವಾಗುತ್ತಿದೆ. ಮಹಿಳೆಯರಿಗೆ ಉಚಿತವಾಗಿ ಆಟೋ ವಿತರಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಣೆಯಾಗಿ 8-9 ತಿಂಗಳು ಕಳೆದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ₹4.10 ಕೋಟಿ ಮೀಸಲಿಟ್ಟು 82 ವಾರ್ಡ್ಗಳಿಗೆ ತಲಾ ಒಂದರಂತೆ ಆಟೋ ನೀಡಲು ಮುಂದಾಗಿರುವ ಪಾಲಿಕೆಗೆ ಈವರೆಗೆ ಸಿಕ್ಕಿರುವುದು ಕೇವಲ 9 ಅರ್ಜಿಗಳು.
ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಹಿರಿಯ ನಾಗರಿಕರಿಗೆ ಸುರಕ್ಷಿತ ಸಾರಿಗೆ ಸೌಲಭ್ಯ ಕಲ್ಪಿಸುವುದರ ಜತೆಗೆ ಮಹಿಳೆಯರಿಗೆ ಸ್ವಂತ ಉದ್ಯೋಗದ ಅವಕಾಶ ಒದಗಿಸುವುದು ಯೋಜನೆಯ ಆಶಯ. ಪ್ರತಿ ವಾರ್ಡ್ಗೆ ಒಂದರಂತೆ 82 ಆಟೋಗಳನ್ನು ವಿತರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಠರಾವು ಅಂಗೀಕರಿಸಲಾಗಿದೆ. ಆದರೆ, ಯೋಜನೆಯ ಘೋಷಣೆಯ ಉತ್ಸಾಹ ಫಲಾನುಭವಿಗಳಿಂದ ಅರ್ಜಿಗಳ ರೂಪದಲ್ಲಿ ವ್ಯಕ್ತವಾಗುತ್ತಿಲ್ಲ.ಉಚಿತ ಆಟೋ, ಆದರೆ ಚಾಲಕರಿಲ್ಲ:
ಉಚಿತವಾಗಿ ಆಟೋ ದೊರೆತರೆ ಸ್ವಂತ ದುಡಿಮೆ ಮೂಲಕ ಆದಾಯ ಗಳಿಸುವ ಅವಕಾಶವಿದೆ. ಆದರೂ ಮಹಿಳೆಯರು ಆಸಕ್ತಿ ತೋರದಿರುವುದು ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ. ಆಟೋ ಚಾಲನೆಗೆ ಅಗತ್ಯವಾದ ಚಾಲನಾ ಪರವಾನಗಿ, ತರಬೇತಿ, ವಾಹನ ನಿರ್ವಹಣೆ, ಆದಾಯದ ಅನಿಶ್ಚಿತತೆ ಹಾಗೂ ಕುಟುಂಬದ ಸಹಕಾರದ ಕೊರತೆ ಮಹಿಳೆಯರ ಹಿಂದೇಟಿಗೆ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಎದುರಾಗಿದೆ.ವಿಶೇಷವಾಗಿ ಆಟೋ ಚಾಲನಾ ಪರವಾನಗಿ ಪಡೆಯುವುದೇ ಮಹಿಳೆಯರಿಗೆ ಆರಂಭಿಕ ಸವಾಲಾಗಿದೆ. ಹುಬ್ಬಳ್ಳಿಯಲ್ಲಿ ಮಹಿಳಾ ಆಟೋ ಚಾಲಕರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಹೊಸದಾಗಿ ಮಹಿಳೆಯರನ್ನು ಈ ವೃತ್ತಿಗೆ ಕರೆತರುವುದು ಸುಲಭದ ಕೆಲಸವಾಗಿಲ್ಲ. ಹೀಗಾಗಿ, ಆಟೋ ನೀಡುವುದಕ್ಕಿಂತ ಮೊದಲು ಮಹಿಳಾ ಚಾಲಕರನ್ನು ಸಿದ್ಧಪಡಿಸುವ ಅಗತ್ಯವೂ ಇದೆ.
ಯೋಜನೆಗಾಗಿ ₹4.10 ಕೋಟಿ ಮೀಸಲಿಟ್ಟಿರುವ ಪಾಲಿಕೆ ಟೆಂಡರ್ ಪ್ರಕ್ರಿಯೆಗೂ ಸಿದ್ಧತೆ ನಡೆಸುತ್ತಿದೆ. ಆದರೆ, 82 ಆಟೋಗಳ ವಿತರಣೆಗೆ ಅಗತ್ಯವಿರುವಷ್ಟು ಫಲಾನುಭವಿಗಳೇ ಸಿಗದಿರುವುದು ದೊಡ್ಡ ಸವಾಲಾಗಿದೆ. ಆಟೋ ಚಾಲಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಸ್ವಸಹಾಯ ಸಂಘಗಳ ಮೂಲಕ ಆಸಕ್ತ ಮಹಿಳೆಯರನ್ನು ಗುರುತಿಸುವ ಕೆಲಸಕ್ಕೆ ವೇಗ ನೀಡಬೇಕಿದೆ.ಮಹಿಳಾ ಸಬಲೀಕರಣದ ಆಶಯದ ಯೋಜನೆಗೆ ಮಹಿಳೆಯರೇ ಮುಂದೆ ಬರದಿರುವುದರ ಹಿಂದಿನ ಕಾರಣವನ್ನು ಪಾಲಿಕೆ ಗಂಭೀರವಾಗಿ ಪರಿಶೀಲಿಸಬೇಕಿದೆ. ಕೇವಲ ಜಾಹೀರಾತು, ಪ್ರಚಾರಕ್ಕೆ ಸೀಮಿತವಾಗದೆ ಚಾಲನಾ ತರಬೇತಿ, ಲೈಸೆನ್ಸ್ ವ್ಯವಸ್ಥೆ ಹಾಗೂ ಕುಟುಂಬಗಳ ಮನವೊಲಿಕೆಗೆ ಮುಂದಾದರೆ ಮಾತ್ರ ಪಿಂಕ್ ಆಟೋ ಯೋಜನೆಗೆ ವೇಗ ಸಿಗಬಹುದು.
ಅರ್ಜಿ ಪ್ರಕ್ರಿಯೆ ಇನ್ನೂ ಬಾಕಿ:ಪಾಲಿಕೆಗೆ ಈವರೆಗೆ ಒಟ್ಟು 9 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಇಬ್ಬರು ಮಹಿಳೆಯರಿಗೆ ಪೂರ್ಣ ಪ್ರಮಾಣದ ಚಾಲನಾ ಪರವಾನಗಿ ದೊರೆತಿಲ್ಲ. ಹೀಗಾಗಿ, ಅವರ ಅರ್ಜಿಗಳ ಪ್ರಕ್ರಿಯೆ ಬಾಕಿಯಿದೆ. ಅರ್ಜಿ ಸಲ್ಲಿಸಲು ಇನ್ನೂ ಕೆಲವು ದಿನ ಕಾಲಾವಕಾಶ ನೀಡಲಾಗುವುದು. ವಿವಿಧ ಸಂಘ-ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುವ ವಿಶ್ವಾಸವಿದೆ ಎಂದು ಮೇಯರ್ ದುರ್ಗಮ್ಮ ಬಿಜವಾಡ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಮಹಿಳೆಯರನ್ನು ಪ್ರೋತ್ಸಾಹಿಸುವ ಪ್ರಯತ್ನ ಸಂಘದಿಂದ ಮಾಡಲಾಗುತ್ತಿದೆ. ಆರ್ಟಿಒ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮೂವರು ಮಹಿಳೆಯರಿಗೆ ಚಾಲನಾ ಪರವಾನಗಿ ಕೊಡಿಸಲು ಸಹಕರಿಸಲಾಗಿದೆ. ಸದ್ಯ ಹುಬ್ಬಳ್ಳಿಯಲ್ಲಿ 8ರಿಂದ 9 ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಇನ್ನಷ್ಟು ಮಹಿಳೆಯರನ್ನು ಯೋಜನೆಗೆ ಕರೆತರುವ ಪ್ರಯತ್ನ ನಡೆದಿದೆ.ಶೇಖರಯ್ಯ ಮಠಪತಿ, ಉತ್ತರ ಕರ್ನಾಟಕ ಆಟೋ ಚಾಲಕ ಸಂಘದ ರಾಜ್ಯಾಧ್ಯಕ್ಷ