ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಿಳಾ ಮೀಸಲಾತಿ ಮಸೂದೆಯನ್ನು ವಿಫಲಗೊಳಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಣ್ಣ ಬಸವಣ್ಣನವರ ಸಮಸಮಾಜ ಕಟ್ಟುವ ವಿಚಾರಗಳು ಇಂದಿಗೂ ಜಗತ್ತಿಗೆ ದಾರಿ ದೀಪ, ಬಸವಣ್ಣನವರು ಪ್ರತಿಪಾದಿಸಿದ ಮಹಿಳಾ ಸಮಾನತೆಯನ್ನು ಜಾರಿಗೊಳಿಸುವ ನರೇಂದ್ರ ಮೋದಿ ಅವರ ಆಶಯಕ್ಕೆ ಕಾಂಗ್ರೆಸ್ ತಣ್ಣೀರೆರಚಿದೆ. ಕಾಂಗ್ರೆಸ್ ಮಾಡಿದ ಈ ಅವಮಾನವನ್ನು ದೇಶದ ಮಹಿಳೆಯರು ಎಂದಿಗೂ ಮರೆಯಲ್ಲ ಎಂದರು.

ಮಹಿಳಾ ಮೀಸಲಾತಿಗೆ ಅನುಮೋದನೆ ಮತ್ತು ಕ್ಷೇತ್ರ ವಿಂಗಡಣೆಯ ಸಾಂವಿಧಾನಿಕ ತಿದ್ದುಪಡಿಯಿಂದ ದೇಶದ ಮಹಿಳೆಯರಿಗೆ ಸಮಾನತೆ ತರುವ ಕೆಲಸ ನಡೆದಿತ್ತು. ಆದರೆ ಇದನ್ನು ಕಾಂಗ್ರೆಸ್ ನೇತೃತ್ವದ ಐಎನ್‌ಡಿಎ ಕೂಟ ಸೋಲಿಸುವ ಮೂಲಕ ಸಂಭ್ರಮಿಸಿದೆ. ಇದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ. ಇದನ್ನು ದೇಶದ ಮಹಿಳೆಯರು ಮರೆಯುವುದಿಲ್ಲ ಎಂದರು.

ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯ ಹೊರತಾಗಿಯೂ ಹಾಲಿ ಇರುವ ಕ್ಷೇತ್ರಗಳನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಸಿದ್ದವಿತ್ತು. ಇದಕ್ಕಾಗಿ ಗೃಹ ಸಚಿವರಾದ ಅಮಿತ್ ಷಾ ಪಾರ್ಲಿಮೆಂಟ್‌ನಲ್ಲೇ ಒಂದು ಗಂಟೆ ಸಮಯ ಕೊಡಿ ಎಂದು ಕೇಳಿಕೊಂಡಿದ್ದರು. ಆದರೆ ವಿಪಕ್ಷಗಳು ದುರುದ್ದೇಶದಿಂದ ಐತಿಹಾಸಿಕ ಮಸೂದೆಯನ್ನು ಸೋಲಿಸಿದವು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಾವ ನೈತಿಕತೆ ಇಟ್ಟುಕೊಂಡು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡುತ್ತದೆ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಜನಧನ್, ಜಿಎಸ್‌ಟಿ, ಜಮ್ಮುಕಾಶ್ಮೀರ ಹೀಗೆ ಹಲವಾರು ವಿಷಯಗಳಲ್ಲಿ ವಿರೋಧಿಸುತ್ತಲೇ ಬಂದಿವೆ. ಮಹಿಳಾ ಮೀಸಲಾತಿ ಮಸೂದೆಯಿಂದ ಬಿಜೆಪಿಗೆ ಕ್ರೆಡಿಟ್ ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಸೋಲಿಸಲಾಗಿದೆ ಎಂದರು.

ಹೊಸನಗರ ಕ್ಷೇತ್ರ ಕುರಿತು ಲೋಕಸಭೆಯಲ್ಲಿ ಮಾತನಾಡಿದ್ದು, ಪಶ್ಚಿಮಘಟ್ಟದ ರಾಜ್ಯಗಳ ಜಿಲ್ಲೆಗಳಲ್ಲಿ ಜನಸಂಖ್ಯೆ ಆಧರಿಸದೆ ಪ್ರಾದೇಶಿಕ ಮಿತಿಯನ್ನು ಆಧರಿಸಿ ಕ್ಷೇತ್ರ ವಿಂಗಡಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಾಧ್ಯಮ ಪ್ರಮುಖ ಎಸ್ . ಚಂದ್ರಶೇಖರ್, ಶ್ರೀಮತಿ ರಶ್ಮಿ ಶ್ರೀನಿವಾಸ್, ಸುರೇಖಾ ಮುರಳೀಧರ, ಹರಿಕೃಷ್ಣ, ಕಾಮತ್, ಮಾಲತೇಶ್, ಮಂಜುನಾಥ್ ಉಪಸ್ಥಿತರಿದ್ದರು.

ನೋಟಿಫಿಕೇಶನ್‌ನಲ್ಲಿ ಯಾವುದೇ ಲೋಪವಾಗಿಲ್ಲ

ಮಹಿಳಾ ಮೀಸಲಾತಿ ಮಸೂದೆಗೆ 2023ರಲ್ಲಿ ಅನುಮೋದನೆ ಸಿಕ್ಕಿದ್ದರೂ, ಮೂರು ವರ್ಷಗಳಾದರೂ ಅದನ್ನು ನೋಟಿಫಿಕೇಶನ್ ಮಾಡದಿರುವಲ್ಲಿ ಯಾವುದೇ ಲೋಪವಾಗಿಲ್ಲ. ಜನಸಂಖ್ಯೆ ಆಧಾರಿತವಾಗಿ ಕ್ಷೇತ್ರ ವಿಂಗಡಣೆ ಉದ್ದೇಶವಿರಲಿಲ್ಲ. 2026ರ ಜನಗಣತಿ ನಂತರ ಅದನ್ನು 2029ರ ಅವಧಿಗೆ ಜಾರಿಗೊಳಿಸುವ ಉದ್ದೇಶದಿಂದ ಸಾಂವಿಧಾನಿಕ ತಿದ್ದುಪಡಿಗೆ ಈಗ ಮಂಡಿಸಲಾಗಿತ್ತು ಎಂದು ಬಿ.ವೈ.ರಾಘವೇಂದ್ರ ಅವರು ಸಮರ್ಥಿಸಿಕೊಂಡರು.