ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಅನೇಕ ಮಹಿಳಾ ಪರ ಯೋಜನೆಗಳನ್ನು ನೀಡಿದ್ದಾರೆ. ಮೋದಿ ಎಂಬ ಶಕ್ತಿಗೆ ಮಹಿಳಾ ಶಕ್ತಿ ಒಗ್ಗೂಡಿ ಕೆಲಸ ಮಾಡಬೇಕು. ಮೋದಿ ಅವರಿಗೆ ಬಲ ತುಂಬಲು ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು ಎಂದು ಸುಳ್ಶ ಶಾಸಕಿ ಭಾಗೀರಥಿ ಮುರುಳ್ಯ ಮನವಿ ಮಾಡಿದರು.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಕನ್ಯಾ ಸಮೃದ್ಧಿ, ಪೋಷಣ್ ಅಭಿಯಾನ, ಹೆರಿಗೆ ರಜೆ ಆರು ತಿಂಗಳಿಗೆ ವಿಸ್ತರಣೆ, ಬಾಣಂತಿಯರಿಗೆ ಆರು ಸಾವಿರ ರು., ಉಜ್ವಲ ಗ್ಯಾಸ್ ಯೋಜನೆ ಮಹಿಳೆಯರಿಗೆ ವರದಾನವಾಗಿದೆ. ದೇಶ ವಿಶ್ವಗುರುವಾಗಲು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದರು.
ಉಪ ಮೇಯರ್ ಸುನೀತಾ, ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಕಾರ್ಯದರ್ಶಿ ಸುಮಾ ಶೆಟ್ಟಿ ಇದ್ದರು.ಹುಬ್ಬಳ್ಳಿ ಘಟನೆ: ಮತಾಂಧ ಶಕ್ತಿಗಳ ಹದ್ದುಬಸ್ತಿನಲ್ಲಿಡಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ಅವರ ಪುತ್ರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಖಂಡನೀಯ. ಮತಾಂಧ ಶಕ್ತಿಗಳ ಬಗ್ಗೆ ರಾಜ್ಯ ಸರ್ಕಾರ ಮೃದು ಧೋರಣೆ ತಳೆದಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಹೇಳಿದರು.ನೇಹಾ ಎಂಬ ಯುವತಿಯನ್ನು ಇರಿದು ಕೊಲೆ ಮಾಡಿರುವುದು ಹೇಯ ಕೃತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ತೆರಳದಂತಾಗಿದೆ. ಕಾಂಗ್ರೆಸ್ ಸರ್ಕಾರ ಮತಾಂಧರಿಗೆ ಬೆಂಬಲ ನೀಡುತ್ತಿದೆ. ಡಿಸಿಎಂ ಶಿವಕುಮಾರ್ ಅವರು ಹೆಣ್ಣಮಕ್ಕಳನ್ನು ಕೇವಲವಾಗಿ ಕಾಣುತ್ತಿದ್ದಾರೆ. ಪಾಕ್ ಪರ ಘೋಷಣೆ, ಬಾಂಬ್ ಸ್ಫೋಟ, ಹಿಂದುಗಳಿಗೆ ಥಳಿತದಂತಹ ಘಟನೆಗಳು ಹೆಚ್ಚಿವೆ. ರಾಜ್ಯ ಸರ್ಕಾರ ಜಿಹಾದಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು ಇದಕ್ಕೆ ಕಾರಣ. ಹಿಂದು ಹುಡುಗಿಯರನ್ನು ಕೆಣಕಬೇಡಿ. ಹುಬ್ಬಳ್ಳಿ ಘಟನೆ ಬಗ್ಗೆ ಚುನಾವಣೆ ಬಳಿಕ ಪ್ರತಿಭಟನೆ ನಡೆಸುತ್ತೇವೆ. ರಾಜ್ಯ ಸರ್ಕಾರ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು, ಮತಾಂಧ ಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಬೇಕು ಎಂದು ಅವರು ಆಗ್ರಹಿಸಿದರು.