ಸಾರಾಂಶ
ಪ್ರತಿದಿನವೂ ಕೆಲವು ಮಹಿಳೆಯರ ತ್ಯಾಗ ಬಲಿದಾನಗಳನ್ನು ನೆನೆಯಬೇಕಾಗುತ್ತದೆ ಎಂದು ಸಮಾಜ ಸೇವಕಿ ಲಯನ್ ಮಾಲತಿ ಹೆಗ್ಡೆ ತಿಳಿಸಿದರು. ಹಾಸನದ ಕುವೆಂಪು ಮಹಿಳಾ ಸಂಘದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನಾಚರಣೆಕನ್ನಡಪ್ರಭ ವಾರ್ತೆ ಹಾಸನ
ಮಹಿಳಾ ದಿನಾಚರಣೆಯಂದು ಮಾತ್ರ ಸಾಧಕ ಮಹಿಳೆಯರ ಹೋರಾಟ, ಸಾಧನೆಗಳ ಬಗ್ಗೆ ಕ್ಷ ಕಿರಣ ಬೀರುವುದಷ್ಟೇ ಅಲ್ಲ ಪ್ರತಿದಿನವೂ ಕೆಲವು ಮಹಿಳೆಯರ ತ್ಯಾಗ ಬಲಿದಾನಗಳನ್ನು ನೆನೆಯಬೇಕಾಗುತ್ತದೆ ಎಂದು ಸಮಾಜ ಸೇವಕಿ ಲಯನ್ ಮಾಲತಿ ಹೆಗ್ಡೆ ತಿಳಿಸಿದರು.ನಗರದಲ್ಲಿ ನಡೆದ ಕುವೆಂಪು ಮಹಿಳಾ ಸಂಘದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸಾವಿತ್ರಿ ಭಾಯಿ ಫುಲೆ, ಕಲ್ಪನಾ ಚಾವ್ಲಾ, ಸುಧಾಮೂರ್ತಿ, ತೇಜಸ್ವಿನಿ ಅನಂತ ಕುಮಾರ್ ಮೊದಲಾದವರ ಸಾಧನೆಗಳು ಇಂದಿಗೂ ಎಂದಿಗೂ ಎಲ್ಲಾ ಹೆಣ್ಣು ಮಕ್ಕಳಿಗೂ ಪ್ರೇರಣಾ ಶಕ್ತಿಯಾಗಿವೆ. ಮಹಿಳಾ ಸಾಧನೆಗಳಿಗೆ ಸ್ಫೂರ್ತಿಯಾಗಿವೆ. ದೀನ ದಲಿತರಿಗೆ ತಮ್ಮ ಕೈಲಾದ ಸಣ್ಣಪುಟ್ಟ ಸಹಾಯ ಮಾಡುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕುವೆಂಪು ಮಹಿಳಾ ಸಂಘದ ಅಧ್ಯಕ್ಷಿಣಿ ಜಯಾ ರಮೇಶ್ ಮಾತನಾಡಿ, ಮಾಲತಿ ಹೆಗ್ಡೆ ಸುಮಾರು ೪೯ ವರ್ಷಗಳಿಂದ ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯಲ್ಲಿ ಅಧ್ಯಕ್ಷಿಣಿಯಾಗಿ, ವಲಯಾಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷರಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಲಯನ್ಸ್ ಸಂಸ್ಥೆ ನಡೆಸುತ್ತಿದ್ದ ವಿಶೇಷಚೇತನ, ಬುದ್ಧಿಮಾಂಧ್ಯರ ಶಾಲೆಯ ಮಕ್ಕಳಿಗೆ ನಿತ್ಯ ಮಧ್ಯಾಹ್ನದ ಬಿಸಿಯೂಟ ನೀಡುವಲ್ಲಿ ಪ್ರೇರಕ ಶಕ್ತಿಯಾಗಿದ್ದರು ಎಂದರು.ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎರಡು ಅನಾಥ ಮಕ್ಕಳಿಗೆ ತಾಯಿಯಾಗಿ ಜೀವನವನ್ನು ಕಲ್ಪಿಸಿಕೊಟ್ಟ ಮಾತೃಹೃದಯಿ ಮಾಲತಿ ಹೆಗ್ಡೆ. ಅವರ ಸಾಧನೆ ಯಾವ ಸಾಧಕಿಗಿಂತ ಕಡಿಮೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ಶಾಂತಲಾ, ಮಾಲಿನಿ ಪ್ರಾರ್ಥನೆ ಮಾಡಿದರು. ಕಲಾನರಸಿಂಹ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಲತಾ ಜಗದೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಪತ್ರಕರ್ತೆ ಲೀಲಾವತಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗ್ಯ, ಸೌಭಾಗ್ಯ, ಸುಜಾತ, ಮುಕ್ತ, ದಾಕ್ಷಾಯಿಣಿ, ಸಾವಿತ್ರಿ, ಶೋಭಾ, ಪದ್ಮಶರ್ಮ, ನಿರ್ಮಲಾ, ಮಮತಾ ಭಾಗವಹಿಸಿದ್ದರು.ಹಾಸನದ ಕುವೆಂಪು ಮಹಿಳಾ ಸಂಘದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಸಮಾಜ ಸೇವಕಿ ಲಯನ್ ಮಾಲತಿ ಹೆಗ್ಡೆ ಉದ್ಘಾಟಿಸಿದರು. ಕುವೆಂಪು ಮಹಿಳಾ ಸಂಘದ ಸದಸ್ಯೆಯರು ಇದ್ದಾರೆ.