ಸಾರಾಂಶ
ಶಿರಸಿ: ಮಳೆ ಹೆಚ್ಚಾಗಿ ಸುರಿದ ಪರಿಣಾಮ ರಸ್ತೆ ನಿರ್ಮಾಣ ಕಾಮಗಾರಿ ಆರಂಭ ವಿಳಂಬವಾಗಿದ್ದು, ಈಗ ರಾಜ್ಯ ಹೆದ್ದಾರಿ, ಜಿಪಂ, ತಾಪಂ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಆದಷ್ಟು ಬೇಗ ಮರುಡಾಂಬರೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಶುಕ್ರವಾರ ಲೋಕೋಪಯೋಗಿ ಇಲಾಖೆಯ 2024-25ನೇ ಸಾಲಿನ 5054 ಜಿಲ್ಲಾ ಮುಖ್ಯ ರಸ್ತೆ ನವೀಕರಣ ಅಡಿಯಲ್ಲಿ ಶಿರಸಿ ತಾಲೂಕಿನ ರಾಜ್ಯ ಹೆದ್ದಾರಿ-93ರಿಂದ ರಾಜ್ಯ ಹೆದ್ದಾರಿ-69ರ ಕೂಡು (ಕಾಲೇಜು ರಸ್ತೆ) ಸುಧಾರಣೆಗೆ ಚಾಲನೆ ನೀಡಿ, ಮಾತನಾಡಿದರು.ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಆರೂವರೆ ತಿಂಗಳು ಮಳೆಯಾಗಿದ್ದು, ಈಗ ಮಳೆ ಬಿಡುವುದು ನೀಡಿದೆ. ಈಗ ರಸ್ತೆ ದುರಸ್ತಿಗೊಳಿಸುವ ಕೆಲಸ ಪ್ರಾರಂಭವಾಗಿದೆ. ಕಾಟಾಚಾರದ ಕೆಲಸ ಆಗಬಾರದು ಎಂಬ ಸೂಚನೆ ನೀಡಲಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ₹75 ಲಕ್ಷದಲ್ಲಿ ಗ್ರಾಮೀಣ ಭಾಗದ ರಸ್ತೆ, ₹85 ಲಕ್ಷ ವೆಚ್ಚದ ಲೋಕೋಪಯೋಗಿ ಇಲಾಖೆಯ ರಸ್ತೆ ಮರುಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಕಾಲೇಜು ರಸ್ತೆಗೆ ₹80 ಲಕ್ಷ ವೆಚ್ಚದ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಕೋಟ್ಯಂತರ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಮಳೆ ಅಧಿಕ ಸುರಿದ ಪರಿಣಾಮ ರಸ್ತೆಯ ವಿಚಾರದಲ್ಲಿ ಸ್ವಲ್ಪ ತೊಂದರೆಯಾಗಿರುವುದು ನಿಜ. ಗ್ರಾಮೀಣ, ನಗರ ಹಾಗೂ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಗೆ ಟೆಂಡರ್ ಆಗಿದೆ. ಚಾಲನೆ ನೀಡಲಾಗುತ್ತಿದೆ ಎಂದರು.
ಬಸ್‌ಗಳ ಸಮರ್ಪಕ ವ್ಯವಸ್ಥೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಶಿರಸಿ ಹಾಗೂ ಸಿದ್ದಾಪುರ ಭಾಗದ ಗ್ರಾಮೀಣ ಪ್ರದೇಶಕ್ಕೆ ಖಾಸಗಿ ಬಸ್ ಇಲ್ಲ. ಆದ್ದರಿಂದ ಹೆಚ್ಚು ಸರ್ಕಾರಿ ಹೊಸ ಬಸ್ ನೀಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಳಿ ವಿನಂತಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಆದಷ್ಟು ಶೀಘ್ರವಾಗಿ ಹೊಸ ಬಸ್ ವ್ಯವಸ್ಥೆ ಆಗಲಿದೆ ಎಂಬ ಭರವಸೆ ನೀಡಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಿಯಾದ ಸಮಯಕ್ಕೆ ಬೆಳಗ್ಗೆ ಮತ್ತು ಸಂಜೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.ರಾಷ್ಟ್ರೀಯ ಹೆದ್ದಾರಿ ವೇಗವಾಗಿ ನಡೆಸುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಯಂತ್ರಗಳು ಇಲ್ಲ. ಕಾಮಗಾರಿಯೂ ವೇಗವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ವೇಗವಾಗಿ ನಡೆಸಲು ಸೂಚಿಸುವಂತೆ ಸಂಸದರು ಜತೆಯೂ ಮಾತನಾಡಿದ್ದೇನೆ. ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ ನೀಡಲಾಗಿದೆ. ಹೊಸ ಕೊಠಡಿ ಮಂಜೂರು ಮಾಡಲಾಗುತ್ತದೆ ಎಂದರು.
ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಗಣೇಶ ದಾವಣಗೆರೆ, ದೀಪಕ ಹೆಗಡೆ ದೊಡ್ಡೂರು, ನಾಗರಾಜ ನಾರ್ವೇಕರ, ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ, ಜ್ಯೋತಿ ಪಾಟೀಲ, ಸುಭಾಷ ನಾಯ್ಕ ಮರಾಠಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))