ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿನ ರಸ್ತೆಗಳ ಅಭಿವೃದ್ದಿಗೆ ೧೭ ಕೋಟಿ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆಯನ್ನು ಎ.ವಿ.ಜಿ. ಲಕ್ಷ್ಮೀನಾರಾಯಣ ಎಂಬುವರಿಗೆ ಒಂದೂವರೆ ವರ್ಷದ ಹಿಂದೆ ನೀಡಲಾಗಿದೆ. ಆದರೆ ಅವರು ಕಾಮಗಾರಿ ನಡೆಸುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಕಾಮಗಾರಿಗಳ ಉಸ್ತುವಾರಿ ವಹಿಸಿರುವ ಯೋಜನಾ ನಿದೇರ್ಶಕರ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಅವರನ್ನು ಅಮಾನತುಪಡಿಸುವಂತೆ ಒತ್ತಾಯಿಸಿ ನಗರಸಭಾ ಸದಸ್ಯರು ನಗರಸಭೆಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲವಾಗಿದ್ದು ಇದಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ನಗರದಲ್ಲಿನ ರಸ್ತೆಗಳು ಹಾಳಾಗಿ ಹೋಗಿದೆ, ವಾಹನಗಳು ಸಂಚರಿಸಲು ಆಗುತ್ತಿಲ್ಲ ಎಂದು ಆರೋಪಿಸಿದರು.
ಗುತ್ತಿಗೆ ನೀಡಿದ್ದರೂ ಕಾಮಗಾರಿ ಇಲ್ಲಈ ಹಿಂದೆ ಅಮೃತಸಿಟಿ ಯೋಜನೆಯಲ್ಲಿ ರಸ್ತೆಗಳನ್ನು ಅವೈಜ್ಞಾನಿಕವಾಗಿ ಅಗೆದು ಹಾಳು ಮಾಡಲಾಗಿತ್ತು. ಅವುಗಳೆಲ್ಲ ದುರಸ್ತಿ ಮಾಡಿ ಹೊಸದಾಗಿ ಡಾಂಬರೀಕರಣ ಹಾಗೂ ಸಿಮೆಂಟ್ ರಸ್ತೆಗಳನ್ನು ಮಾಡಲು ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆಯಲಾಗಿತ್ತು, ಗುತ್ತಿಗೆದಾರ ಲಕ್ಷ್ಮೀನಾರಾಯಣರಿಗೆ ೧೭ ಕೋಟಿ ಕಾಮಗಾರಿ ನೀಡಲಾಗಿತ್ತು ಎಂದರು. ಆದರೆ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದೆ ಆದರೂ ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ, ಈಗಾಗಲೇ ನಗರಸಭೆ ಆಡಳಿತಾಧಿಕಾರಿ ಜಿಲ್ಲಾಧಿಕಾರಿ ಬಳಿ ಎಲ್ಲಾ ಸದಸ್ಯರು ಈವರೆಗೆ ಹಲವಾರು ಭಾರಿ ಚರ್ಚೆಗಳು ಹಾಗೂ ಸಭೆಗಳು ಮಾಡಿದ್ದರೂ ಪ್ರಯೋಜನವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಯಾವುದೇ ಸೂಚನೆ ನೀಡದೆ ಕಾಮಗಾರಿ ಪೂರ್ಣಗೊಳಿಸದೆ ವಿಳಂಬ ಧೋರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ನಾವು ಛೀಮಾರಿಗೆ ತುತ್ತಾಗುತ್ತಿದ್ದೇವೆ. ವಾರ್ಡಿನ ಜನತೆಗೆ ಮುಖ ತೋರಿಸಲಾಗದೆ ತಲೆ ತಪ್ಪಿಸಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯಹೌದು ನಮ್ಮದೇ ಸರ್ಕಾರ, ನಮ್ಮವರೇ ಜನಪ್ರತಿನಿಧಿಗಳು ಆಗಿದ್ದಾರೆ. ಹಾಗಂತ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡದಿದ್ದರೆ ನಾವು ಪ್ರಶ್ನಿಸ ಬಾರದೆ. ಸರ್ಕಾರವು ಅನುದಾನ ಬಿಡುಗಡೆ ಮಾಡಿದೆ. ಆದರೆ ಅದನ್ನು ನಿಗದಿತ ಅವಧಿಯಲ್ಲಿ ಸದ್ಬಳಿಸಿಕೊಳ್ಳದೆ ಅಧಿಕಾರಿಗಳ ನಿರ್ಲಕ್ಷಿಸುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಗುತ್ತಿಗೆದಾರನಿಂದ ಕೆಲಸ ಪೂರ್ಣಗೊಳಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು.
ಆದರೆ ಅಧಿಕಾರಿಗಳು ಗುತ್ತಿಗೆದಾರರಿಂದ ಕಾಮಗಾರಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದನ್ನು ಪ್ರಶ್ನಿಸುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತದ ಗಮನ ಸೆಳೆಯಲು ನಗರಸಭಾ ಸದಸ್ಯರು ಪ್ರತಿಭಟಿಸುವ ಮೂಲಕ ಗಮನ ಸೆಳೆಯ ಬೇಕಾಗಿರುವುದು ಅನಿವಾರ್ಯ ಎಂದರು.ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಅಂಬರೀಷ್, ಪ್ರಸಾದ್ ಬಾಬು, ನಾರಾಯಣಮ್ಮ, ಶಂಕರ್ ಇದ್ದರು.