ವುಡ್ ವರ್ಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

| Published : May 15 2024, 01:31 AM IST

ವುಡ್ ವರ್ಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಮೀನಾಕ್ಷಿ ಬ್ಲಾಕಿನಬ ವುಡ್ ವರ್ಕ್ಸ್ ಗೆ ತಹಸಿಲ್ದಾರ್ ಪೂರ್ಣಿಮಾ ಅವರ ಅನುಮತಿಯೊಂದಿಗೆ ಕಾರ್ಮಿಕ ನಿರೀಕ್ಷಕರಾದ ಗೋವಿಂದರಾಜು ಮೈಸೂರು ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಬಾಲಕನನ್ನು ರಕ್ಷಿಸಿ ಜೊತೆಗೆ ಆತನನ್ನು ಕೆಲಸಕ್ಕೆ ಸೇರಿಸಿಕೊಂಡ ಇಬ್ಬರ ವಿರುದ್ಧ ದೂರನ್ನು ದಾಖಲಿಸಿದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಸೆಕ್ಷನ್ ಸೆವೆಂಟೀನ್ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ದಾಳಿ ನಡೆಸಿ ಪಟ್ಟಣದ ಮೀನಾಕ್ಷಿ ಬಡಾವಣೆಯ ವುಡ್ ವರ್ಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಿದ್ದಾರೆ.

ರಕ್ಷಣೆ ಮಾಡಿದ ಬಾಲಕನನ್ನು ಮೈಸೂರಿನ ಬಾಲ ಮಂದಿರಕ್ಕೆ ಕಳುಹಿಸಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪಟ್ಟಣದ ಮೀನಾಕ್ಷಿ ಬ್ಲಾಕಿನಬ ವುಡ್ ವರ್ಕ್ಸ್ ಗೆ ತಹಸಿಲ್ದಾರ್ ಪೂರ್ಣಿಮಾ ಅವರ ಅನುಮತಿಯೊಂದಿಗೆ ಕಾರ್ಮಿಕ ನಿರೀಕ್ಷಕರಾದ ಗೋವಿಂದರಾಜು ಮೈಸೂರು ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಬಾಲಕನನ್ನು ರಕ್ಷಿಸಿ ಜೊತೆಗೆ ಆತನನ್ನು ಕೆಲಸಕ್ಕೆ ಸೇರಿಸಿಕೊಂಡ ಇಬ್ಬರ ವಿರುದ್ಧ ದೂರನ್ನು ದಾಖಲಿಸಿದೆ.

ಈ ಬಾಲಕ ತಂದೆ ತಾಯಿಯಿಂದ ದೂರವಿದ್ದು, ಅಜ್ಜಿಯ ಆಶ್ರಯದಲ್ಲಿ ಪಟ್ಟಣದ ಬಾಲಕರ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡು ಪಟ್ಟಣದಲ್ಲಿಯೇ ವಾಸವಾಗಿದ್ದ.

ರಕ್ಷಣೆ ಮಾಡಿದ ಬಾಲ ಕಾರ್ಮಿಕನನ್ನು ಮೈಸೂರಿನ ಇಎಸ್.ಐ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನಂತರ ವಿಜಯನಗರ ಬಾಲಕರ ಬಾಲ ಮಂದಿರಕ್ಕೆ ಬಿಡಲಾಗಿದೆ ಎಂದು ಕಾರ್ಮಿಕ ನಿರೀಕ್ಷಕ ಗೋವಿಂದರಾಜು ತಿಳಿಸಿದರು.

ಬಾಲ ಕಾರ್ಮಿಕನನ್ನು ರಕ್ಷಣೆ ಮಾಡುತ್ತಿದ್ದ ವೇಳೆ ಅಧಿಕಾರಿಗಳ ಮೇಲೆ ಮುಗಿಬಿದ್ದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಬಾಲಕನನ್ನು ರಕ್ಷಿಸಲು ಬಿಡುವುದಿಲ್ಲ, ಅವನು ಇಲ್ಲಿ ಕೆಲಸವನ್ನೇ ಮಾಡುತ್ತಿಲ್ಲ ಎಂದು ತಡೆಯೊಡ್ಡಲು ಮುಂದಾದರು, ಅದಕ್ಕೆ ಸಮಂಜಸ ಉತ್ತರ ನೀಡಿದ ಅಧಿಕಾರಿಗಳ ತಂಡ ಕಾನೂನು ಮತ್ತು ಸರ್ಕಾರದ ಆದೇಶದ ಮೇರೆಗೆ ದಾಳಿ ನಡೆಸಲಾಗಿದ್ದು, ತನಿಖೆ ನಡೆಸಿ ಬಾಲಕನನ್ನು ಬಿಡಲಾಗುವುದು ಎಂದಾಗ ನಾಗರೀಕರು ಜಾಗ ಖಾಲಿ ಮಾಡಿದರು.

ದಾಳಿ ವೇಳೆ ಬಿಸಿಎಂ ಇಲಾಖೆಯ ಮಹೇಶ್, ಪುರಸಭಾ ಎಂಜಿನಿಯರ್ ರಾಜೇಂದ್ರ, ಪೊಲೀಸ್ ಪೇದೆ ಹರೀಶ್, ಕಾರ್ಮಿಕ ಇಲಾಖೆಯ ಚಂದ್ರಕಾಂತ್ ಇದ್ದರು.