ಕನ್ನಡಪ್ರಭ ವಾರ್ತೆ ತುಮಕೂರುರಾಷ್ಟ್ರೀಯ ಹೆದ್ದಾರಿ-69 ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 22 ರಂದು ಗುತ್ತಿಗೆ ಆದೇಶ ನೀಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆ ಸಚಿವ ಹಾಗೂ ಸಂಸದ ವಿ. ಸೋಮಣ್ಣ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-69ರ ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಕಾಮಗಾರಿಗೆ ಅನುಮೋದನೆ ನೀಡುವಂತೆ 2025ರ ಫೆಬ್ರವರಿ 6ರಂದು ಮಾಡಲಾಗಿದ್ದ ಮನವಿಗೆ ಸ್ಪಂದಿಸಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ 2025ರ ಮಾರ್ಚ್ ೭ರಂದು ರಾಷ್ಟ್ರೀಯ ಹೆದ್ದಾರಿ-69ರ ಶಿರಾ-ಬಡವನಹಳ್ಳಿ 20.2 ಕಿ.ಮೀ. ಉದ್ದದ ಚತುಷ್ಪಥ ರಸ್ತೆಗೆ ೫೮೪.೯೮ ಕೋಟಿ ರೂ. ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು.

ಅದೇ ರೀತಿ ಬಡವನಹಳ್ಳಿಯಿಂದ ಭೈರೇನಹಳ್ಳಿ ಭಾಗದ 32 ಕಿ.ಮೀ. ಚತುಷ್ಪಥ ರಸ್ತೆಗೆ 1000 ಕೋಟಿ ರೂ.ಗಳಿಗೆ ಅನುಮೋದನೆ ಪಡೆಯುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿವಸಗಳಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾತಿ ಪಡೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-69 ರ ಶಿರಾ-ಬಡವನಹಳ್ಳಿ-ಭೈರೇನಹಳ್ಳಿ ಒಟ್ಟು 52 ಕಿ.ಮೀ. ಅಂದಾಜು 1585 ಕೋಟಿ ರೂ. ವೆಚ್ಚದ ಚತುಷ್ಪಥ ಹೆದ್ದಾರಿ ನಿರ್ಮಾಣವಾಗುವುದರಿಂದ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಿಂದ ತಿರುಪತಿ ಮತ್ತು ಚೆನ್ನೈ ನಡುವಿನ ಪ್ರಯಾಣಕ್ಕೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಶಿರಾದಿಂದ–ತುಮಕೂರು-ದಾಬಸಪೇಟೆ-ಕೋಲಾರ ಮಾರ್ಗವಾಗಿ ತಿರುಪತಿಗೆ ತಲುಪಲು ಸುಮಾರು 6 ರಿಂದ 7 ಗಂಟೆಗಳ ಪ್ರಯಾಣದ ಅವಧಿ ಇದ್ದು, ಈ ಹೆದ್ದಾರಿ ನಿರ್ಮಾಣದಿಂದ ಶಿರಾದಿಂದ ಮಧುಗಿರಿ, ಚಿಕ್ಕಬಳ್ಳಾಪುರ ಚಿಂತಾಮಣಿ ಮಾರ್ಗವಾಗಿ ತಿರುಪತಿಗೆ ಕೇವಲ 4 ಗಂಟೆಯ ಅವಧಿಯಲ್ಲಿ ತಲುಪಲು ಅನೂಕೂಲವಾಗಲಿದೆ ಹಾಗೂ ಶಿರಾದಿಂದ ತಿರುಪತಿಗೆ ಸುಮಾರು 60 ಕಿ.ಮೀ. ರಸ್ತೆ ಪ್ರಯಾಣ ಕಡಿಮೆಯಾಗಲಿದೆ. ಇದಲ್ಲದೆ ವಸಂತನರಸಾಪುರ ಹಾಗೂ ಶಿರಾ ಕೈಗಾರಿಕಾ ಪ್ರದೇಶಗಳಿಗೆ ಚೆನ್ನೆöÊ ಬಂದರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಈ ಹೆದ್ದಾರಿ ಶಿರಾ-ಬೆಂಗಳೂರಿನ ನಡುವಿನ ಪರ್ಯಾಯ ರಸ್ತೆಗೆ ಸಂಪರ್ಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ತುಮಕೂರು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.