ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಅಪಘಾತದಲ್ಲಿ ಬದುಕುಳಿದವರ ಜೀವನವನ್ನು ಕಟ್ಟು ಕೆಲಸವಾಗಬೇಕಾಗಿದೆ ಎಂದು ಬೆಂಗಳೂರಿನ ಗವಿಪುರದ ಗೋಸಾಯಿ ಮರಾಠ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.ಅವರು ಸಮೀಪದ ಎಮ್ಮೆಹಟ್ಟಿಯಲ್ಲಿ ಕಳೆದ ಶುಕ್ರವಾರ ಹಾವೇರಿ ಬಳಿ ನಡೆದ ಅಪಘಾತದಲ್ಲಿ ಮೃತರ ಕುಟುಂಬಗಳ ಸದಸ್ಯರನ್ನು ಸೋಮವಾರ ಭೇಟಿ ಮಾಡಿ ಮಾತನಾಡಿದರು.
ಮಡಿದು ಮಸಣ ಸೇರಿದವರ ಜಾಗ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಮನಸಿಗೆ ಬೇಕಾದವರು ಅಗಲಿಕೆ ತಡೆದುಕೊಳ್ಳದಷ್ಟು ನೋವು ನೀಡುತ್ತದೆ. ಪ್ರಜ್ಞೆಗೆ ಬರುವಷ್ಠರಲ್ಲಿ ಅಪಘಾತಗಳು ನಡೆದು ಹೋಗಿ ಪರಿಸ್ಥಿತಿ ಕಾಲನ ಕೈಗೆ ಸಿಕ್ಕಿರುತ್ತದೆ. ಕುಟುಂಬದಲ್ಲಿನ ವ್ಯಕ್ತಿಗಳು ಅಗಲಿಕೆ ಏನು ಕೊಟ್ಟರೂ ಬರುವುದಿಲ್ಲ ಎಂದರು.ಜನ ಪ್ರತಿನಿಧಿಗಳು ಸರ್ಕಾರದಿಂದ ಬರುವ ಅನುದಾನವನ್ನು ನೀಡಲಿ. ಸಮಾಜದ ಸಂಘ ಸಂಸ್ಥೆಗಳು, ಸಂಘಟನೆಗಳು ಮೃತರ ಕುಟುಂಬಗಳ ನೆರವಿಗೆ ನಿಲ್ಲಬೇಕು ಎಂದರು.
ಸತ್ಕರ್ಮ, ಧಾನ, ಧರ್ಮಗಳು ಕೊನೆಗಾಲದಲ್ಲಿ ಕೈ ಹಿಡಿಯುತ್ತವೆ. ಪರಮಾತ್ಮ ನೀಡಿದ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬದುಕಿನಲ್ಲಿ ಲೌಕಿಕವಾಗಿ ಹೆಜ್ಜೆ ಹಾಕುವಾಗ ಅನು ಕ್ಷಣವೂ ವಿಚಾರ ಮಾಡಬೇಕು. ಸವಧಾನವೊಂದೆ ಅಪಘಾತಗಳನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಎಂದರು.ಚನ್ನಗಿರಿ ಕೇದಾರ ಶಾಖಾಮಠದ ಶಿವ ಶಾಂತವೀರ ಸ್ವಾಮಿಗಳು ಮಾತನಾಡಿ, ಅಸಹಜ ಸಾವುಗಳು ಮನಸಿಗೆ ತಡೆಯಲಾಗದಷ್ಟು ನೋವು ನೀಡುತ್ತವೆ. 13 ಜನ ಮೃತಪಟ್ಟಿ ರುವ ಅಪಘಾತವನ್ನು ಸರ್ಕಾರಗಳು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಚಿಕಿತ್ಸಾ ವೆಚ್ಚ ಭರಿಸುವುದಕ್ಕೆ ಜನ ಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಬೇಕು. ಸ್ಥಳೀಯ ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಧಾವಿಸಬೇಕು ಎಂದರು.
ರಾಜ್ಯ ರೈತ ಸಂಘದ ವರಿಷ್ಠ ನಾಯಕ ಕೆ.ಟಿ.ಗಂಗಾಧರ್, ಕೇಂದ್ರ ಸರ್ಕಾರ ಎಮ್ಮೆಹಟ್ಟಿ ಪ್ರಕರಣವನ್ನು ರಾಷ್ಟ್ರದ ಅಘಾತ ಎಂದು ಘೋಷಿಸಬೇಕು. ಇದರಲ್ಲಿ ಬರುವ ಎಲ್ಲಾ ಸವಲತ್ತುಗಳನ್ನು ಮೃತರ ಕುಟುಂಬಗಳಿಗೆ ಸೇರಬೇಕು. ಸದ್ಯದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೊದಲು ನೀಡಿರುವ ಪರಿಹಾರದ ಮೊತ್ತವನ್ನು ಮತ್ತಷ್ಟು ಹೆಚ್ಚಿಸುವಂತೆ ಕೋರಲಾಗುವುದು ಎಂದರು.ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ತಾಲೂಕು ಮರಾಠ ಸಂಘದ ಅಧ್ಯಕ್ಷ ಲೋಕೇಶ್ ರಾವ್, ನಿವೃತ್ತ ಮುಖ್ಯ ಶಿಕ್ಷಕ ಹಾಲೋಜಿರಾವ್, ಸಚಿನ್ ಸಿಂಧ್ಯ, ವೀರೇಶ್, ಡಿ.ಯಲ್ಲಪ್ಪ, ಮಲ್ಲೇಶಪ್ಪ, ಬಾಳೋಜಿ ಬಸವರಾಜ್, ಬಾಳೋಜಿ ಕೃಷ್ಣೋಜಿ ರಾವ್, ಮಲ್ಲೇಶ್ ರಾವ್ , ರಂಗೋಜಿ ರಾವ್, ಬಸವ ರಾಜ್, ಮಂಜುನಾಥ ರಾವ್, ಕಿರಣ್ ಮೊರೆ, ಮುರಾರಿರಾವ್ ಇತರರಿದ್ದರು.