ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಬಾಲ ಕಾರ್ಮಿಕತೆ, ಪೋಕ್ಸೋ ಪ್ರಕರಣ ಹಾಗೂ ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ಜಿಲ್ಲೆಯಲ್ಲಿ ತಡೆಗಟ್ಟಲು ಎಲ್ಲಾ ಇಲಾಖೆಗಳು ಸಮನ್ವಯ ಹಾಗೂ ತಂಡದ ರೀತಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್. ಮಂಜುಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಬಾಲಕಾರ್ಮಿಕತೆ, ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣ ತಡೆಗಟ್ಟುವುದು ಕೇವಲ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆಯ ಕೆಲಸ ಎಂದು ಭಾವಿಸಬಾರದು. ಎಲ್ಲ ಇಲಾಖೆಯವರು ತಮ್ಮ ಇಲಾಖೆಯ ಕಾರ್ಯ ವ್ಯಾಪ್ತಿಯಲ್ಲಿ ಸಂಪರ್ಕಕ್ಕೆ ಬರುವವರ ಬಗ್ಗೆ ನಿಗಾ ವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದರೆ ಸಕ್ಷಮ ಪ್ರಾಧಿಕಾರಿಗಳಿಗೆ ಮಾಹಿತಿ ನೀಡುವ ಜೊತೆಗೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಆಗುವಂತೆ ಮಾಡಬೇಕು. ಒಂದು ಸಾಂಘಿಕ ಪ್ರಯತ್ನದಿಂದ ಮಾತ್ರ ಇಂತಹ ಅನಿಷ್ಟ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ತಿಳಿಸಿದರು.ಸರ್ಕಾರದ ಎಲ್ಲಾ ಕಾರ್ಯಕ್ರಮಗಳು, ಸೌಲಭ್ಯಗಳು, ಕಾಲ ವಿಳಂಬವಿಲ್ಲದೆ ಕಾಲೋಚಿತವಾಗಿ ತಲುಪಿಸಬೇಕು. ಅನಗತ್ಯ ಕಾರಣಗಳನ್ನು ನೀಡಿ ಸಕಾಲ ಯೋಜನೆಯಡಿ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ಜನರಿಗೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಆಡಳಿತ ವರ್ಗದಿಂದ ಕಾನೂನಾತ್ಮಕವಾಗಿ ಎಲ್ಲವನ್ನು ಮಾಡಬೇಕುಎಂದರು.ಕೇಂದ್ರ ಸ್ಥಾನದಲ್ಲಿರಿ:

ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿ ಸರ್ಕಾರದ ಆಶಯದಂತೆ ಸಮರ್ಪಕವಾಗಿ ಹಾಗೂ ಕಾಲೋಚಿತವಾಗಿ ಕಾರ್ಯ ನಿರ್ವಹಿಸಲು ಮುಖ್ಯವಾಗಿ ತಮ್ಮ ಕಾರ್ಯವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿದ್ದು, ಪ್ರಮಾಣಿಕವಾಗಿ ಸರ್ಕಾರಿ ಕೆಲಸವನ್ನು ನಿರ್ವಹಿಸಬೇಕು. ಪ್ರತಿಯೊಬ್ಬರು ಕರ್ತವ್ಯ ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಈ ತಂತ್ರಾಂಶದ ಮೂಲಕವೇ ಹಾಜರಾತಿ ಹಾಕಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಎಸ್ಪಿ ಕುಶಲ್ ಚೌಕ್ಸೆ, ಎಡಿಸಿ ಡಾ.ಎನ್.ಭಾಸ್ಕರ್, ಎಸಿ ಡಿ.ಹೆಚ್. ಅಶ್ವಿನ್, ಜಿ.ಪಂ. ಉಪಕಾರ್ಯದರ್ಶಿ ಅತಿಕ್ ಪಾಷಾ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಸಿಕೆಬಿ-4 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.