ನೆರೆ ಹಾವಳಿ ಎದುರಿಸಲು ಒಗ್ಗಟ್ಟಿನಿಂದ ಶ್ರಮಿಸಿ: ಶಾಸಕ ಲಕ್ಷ್ಮಣ ಸವದಿ

| Published : Jul 28 2024, 02:00 AM IST

ನೆರೆ ಹಾವಳಿ ಎದುರಿಸಲು ಒಗ್ಗಟ್ಟಿನಿಂದ ಶ್ರಮಿಸಿ: ಶಾಸಕ ಲಕ್ಷ್ಮಣ ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ನದಿ ತೀರದ 22 ಹಳ್ಳಿಗಳಲ್ಲಿ ತಲೆದೋರುವ ನೆರೆಹಾವಳಿ ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕೃಷ್ಣಾ ನದಿ ತೀರದ 22 ಹಳ್ಳಿಗಳಲ್ಲಿ ತಲೆದೋರುವ ನೆರೆಹಾವಳಿ ಎದುರಿಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಅಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ 2019 ಮತ್ತು 2021ರಲ್ಲಿ ಆಗಿರುವ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಶಾಸಕ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ತಾಪಂ ಸಭಾಂಗಣದಲ್ಲಿ ಪ್ರವಾಹ ಸಿದ್ಧತೆ ಕುರಿತು ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಸಕಲ ಸಿದ್ಧತೆ ಕುರಿತು ಸಲಹೆ ಸೂಚನೆ ನೀಡಿದರು. ತಾಲೂಕುಮಟ್ಟದ ಅಧಿಕಾರಿಗಳು ಪ್ರತಿ ಹಳ್ಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರ ಆರಂಭಿಸುವ ಮೂಲಕ ಅವರಿಗೆ ಊಟ ವಸತಿ ಮತ್ತು ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದರು.

ಪ್ರವಾಹಕ್ಕೆ ಸಿಲುಕುವ ಗ್ರಾಮಸ್ಥರ ಸ್ಥಳಾಂತರ ಹಾಗೂ ಅವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಹೆಚ್ಚಿನ ಸಹಾಯ ಬೇಕಿದ್ದರೆ ನಾನು ನಿಮ್ಮ ಜೊತೆಗೆ ಇರುತ್ತೇನೆ. ಎಲ್ಲ ಅಧಿಕಾರಿಗಳು ಒಗ್ಗಟ್ಟು, ನಿಸ್ವಾರ್ಥದಿಂದ ಕೆಲಸ ಮಾಡಿ ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಪ್ರತಿ ದಿನ ಸರಿಯಾದ ಸಮಯಕ್ಕೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಬೇಕು. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯುತ್ ವ್ಯವಸ್ಥೆ ಕೈಕೊಳ್ಳಬೇಕು. ಜಾನುವಾರುಗಳ ಆರೋಗ್ಯ ಮತ್ತು ಅವುಗಳಿಗೆ ಬೇಕಾಗುವ ಹಸಿ ಹಾಗೂ ಒಣ ಮೇವಿನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರೊಬೇಷನರಿ ಐಎಎಸ್ ನೋಡಲ್ ಅಧಿಕಾರಿ ದಿನೇಶಕುಮಾರ ಮೀನಾ , ಜಿಪಂ ಯೋಜನಾಧಿಕಾರಿ ರವೀಂದ್ರ ಬಂಗಾರಪ್ಪನವರ, ತಹಸೀಲ್ದಾರ್ ವಾಣಿ. ಯು, ತಾಪಂ ಇಒ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ನಂತರ ಶಾಸಕ ಲಕ್ಷ್ಮಣ ಸವದಿ ಪ್ರಮುಖ ಅಧಿಕಾರಿಗಳ ಜೊತೆಗೆ ನದಿ ತೀರದ ಹಲ್ಯಾಳ, ದರೂರ, ನದಿ ಇಂಗಳಗಾವ, ಸಪ್ತಸಾಗರ ಮತ್ತು ತೀರ್ಥ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಹಲ್ಯಾಳ ಮತ್ತು ದರೂರು ಸೇತುವೆಯ ಹತ್ತಿರ ಕೃಷ್ಣಾ ನದಿಯಲ್ಲಿ ಒಳಹರಿವು ನೀರಿನ ಪ್ರಮಾಣ ವೀಕ್ಷಿಸಿದರು.

ಪಾಠ ಮಾಡಿದ ಶಾಸಕರು : ನೆರೆಯ ಮಹಾರಾಷ್ಟ್ರದಲ್ಲಿ ಉಗಮವಾಗುವ ಕೃಷ್ಣಾ ನದಿಯ ಉಪನದಿಗಳ ಬಗ್ಗೆ ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಪ್ರಶ್ನೆ ಮಾಡಿದಾಗ ಬಹುತೇಕ ಅಧಿಕಾರಿಗಳು ಮೌನಕ್ಕೆ ಶರಣರಾದರು. ನಂತರ ಅವರೇ ಉಪನದಿಗಳ ಹೆಸರುಗಳನ್ನು ಮತ್ತು ಅವುಗಳಿಗಿರುವ ಅಣೆಕಟ್ಟುಗಳ ಹೆಸರು ಮತ್ತು ವ್ಯಾಪ್ತಿ ಪ್ರದೇಶ ಕುರಿತು ಶಿಕ್ಷಕರಂತೆ ಅಧಿಕಾರಿಗಳಿಗೆ ಪಾಠ ಮಾಡಿದ್ದು ಗಮನ ಸೆಳೆಯಿತು.

ನೋಟಿಸ್‌ ನೀಡಲು ಸೂಚನೆ:

ಈಗಾಗಲೇ ತಾಲೂಕು ಆಡಳಿತದಿಂದ ಗ್ರಾಮ ಮಟ್ಟದಲ್ಲಿ ನೇಮಿಸಿರುವ ನೋಡಲ್ ಅಧಿಕಾರಿಗಳು ಮತ್ತು ಅವರ ಸಹಾಯಕ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದು ಕಂಡು ಬಂದಿದೆ. ಅಲ್ಲದೆ ಇಂದಿನ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತುಕ್ರಮ ಕೈ ಕೊಳ್ಳುವಂತೆ ತಹಸೀಲ್ದಾರಗೆ ಸೂಚನೆ ನೀಡಿದರು.

ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ: ತಹಸೀಲ್ದಾರ್‌

ಅಥಣಿ: ಕೃಷ್ಣಾ ನದಿ ತೀರದ 22 ಗ್ರಾಮಗಳಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದ್ದು, ಸದ್ಯ ಪ್ರಾಥಮಿಕ ಹಂತದಲ್ಲಿ ಪ್ರವಾಹ ಎದುರಿಸುತ್ತಿರುವ ತೋಟದ ಜನವಸತಿ ಕುಟುಂಬಗಳನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ ಎಂದು ತಹಸೀಲ್ದಾರ ವಾಣಿ ಯು. ಹೇಳಿದರು.

ತಹಸಿಲ್ದಾರ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಗ್ರಾಮದಲ್ಲಿ ನೋಡಲು ಅಧಿಕಾರಿಗಳ ನೇಮಕ ಸೇರಿದಂತೆ ಪ್ರಾಥಮಿಕ ಹಂತದಲ್ಲಿರುವ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಹುಲಗಬಾಳಿ ಮತ್ತು ಸಪ್ತಸಾಗರ, ಜಂಜರವಾಡ ಮತ್ತು ಶಿರಹಟ್ಟಿ ಗ್ರಾಮಗಳಲ್ಲಿನ ತೋಟದ ವಸತಿಯ ನಡುಗುಡ್ಡೆ ಪ್ರದೇಶದ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಗಳಲ್ಲಿ ಊಟ ವಸತಿ ಮತ್ತು ದನ ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿ ಏಳು ಬೋಟುಗಳ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ 5 ಬೋಟ್‌ ಗಳ ಅಗತ್ಯವಿದ್ದು, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಹಿಪ್ಪರಗಿ ಅಣೆಕಟ್ಟು ಯೋಜನೆಯ ನೀರಾವರಿ ಇಲಾಖೆಯ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಹುಣಸಿಕಟ್ಟಿ ಮಾತನಾಡಿ, ಈಗಾಗಲೇ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಒಂದೆರಡು ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ನೆರೆಹಾವಳಿ ಎದುರಿಸಬೇಕಾಗುತ್ತದೆ ಎಂದ ಅವರು,

ನೆರೆ ಹಾವಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಿದ್ದು, ಏನೇ ತೊಂದರೆಯಿದ್ದರೂ 917349312928 ಸಂಪರ್ಕಿಸಬಹುದಾಗಿದೆ ಎಂದರು.

ತಾಪಂ ಇಒ ಶಿವಾನಂದ ಕಲ್ಲಾಪುರ, ಉಪ ತಹಸೀಲ್ದಾರ ಮಹಾದೇವ ಬಿರಾದಾರ, ಬಿ.ವೈ. ಹೊಸಕೇರಿ, ಪ್ರವೀಣ್ ಹುಣಸಿಕಟ್ಟಿ ಸೇರಿದಂತೆ ಇನ್ನಿತರರು ಇದ್ದರು.