ಸಭಾ ಕಾರ್ಯಕ್ರಮಕ್ಕೆ ಮುನ್ನ ಈಶಾನ್ಯ ಭಾರತ ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಏರ್ಪಟ್ಟಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾನೂನು ಮತ್ತು ಸಂವಿಧಾನ ವ್ಯಾಪ್ತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಶನಿವಾರ ‘ಭಾರತ ಸಂವಿಧಾನ-ಅಮೃತೋತ್ಸವ 75ರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಂವಿಧಾನವೇ ಕಾರಣ. ಇಷ್ಟಾದರೂ ಸಂವಿಧಾನವನ್ನು ಬಳಸಿಕೊಳ್ಳಲು ನಾವು ವಿಫಲರಾಗಿದ್ದೇವೆ. ಸಂವಿಧಾನವನ್ನು ಪೂರ್ತಿ ಅಭ್ಯಶಿಸಿ ಅದನ್ನು ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.

ಕಾನೂನು ಮತ್ತು ಸಂವಿಧಾನ ನನ್ನ ಆಸಕ್ತಿಯ ವಿಷಯವಾಗಿದೆ. ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು ಎಂಬ ಇರಾದೆ ನನ್ನದು. ಸಂವಿಧಾನ ರಚನಾ ಸಭೆಯಲ್ಲಿ ಕರಾವಳಿಯ ಐವರು ಭಾಗವಹಿಸಿದ್ದರು ಎಂಬುದು ಸಂತಸದ ಸಂಗತಿ. ಈ ಐವರ ಬಗ್ಗೆ ಸಮಾಜಕ್ಕೆ ಮಾಹಿತಿ ನೀಡಬೇಕಾಗಿದೆ ಎಂದರು.

ಮಂಗಳೂರು ಪಾಲಿಕೆ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯಣ್ಣ, ಕರ್ಣಾಟಕ ಬ್ಯಾಂಕ್‌ ಮಾಜಿ ಎಂಡಿ ಮಹಾಬಲೇಶ್ವರ್‌ ಇದ್ದರು. ಕಾರ್ಯಕ್ರಮ ಆಯೋಜಕ ಡಾ.ಪಿ.ಅನಂತಕೃಷ್ಣ ಭಟ್‌ ಅವರು ಭಾರತ ಸಂವಿಧಾನ ಕುರಿತು ಮಾತನಾಡಿದರು. ಇದೇ ಸಂದರ್ಭ ಸಂವಿಧಾನ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಈಶಾನ್ಯ ಭಾರತ ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಏರ್ಪಟ್ಟಿತು. ನಂದಿತಾ ನಿರೂಪಿಸಿದರು.