ಕೆಲ ಖಾಸಗಿ ವ್ಯಕ್ತಿಗಳು ವಿಡಿಯೋ ಹಾಗೂ ಪೋಟೋಗಳನ್ನು ತೆಗೆದು ಸರ್ಕಾರಿ ಅಧಿಕಾರಿಗಳು ಅದರಲ್ಲೂ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರನ್ನು ಬೆದರಿಸುವ ಘಟನೆಗಳು ನಡೆದಿದ್ದು, ಆ ರೀತಿಯಾಗಿ ಯಾವುದೇ ಘಟನೆ ನಡೆದರೆ ಕೂಡಲೇ ಕಾನೂಕು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ಸಯ್ಯದ್ ರಖೀಬ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾವಗಡ
ಕೆಲ ಖಾಸಗಿ ವ್ಯಕ್ತಿಗಳು ವಿಡಿಯೋ ಹಾಗೂ ಪೋಟೋಗಳನ್ನು ತೆಗೆದು ಸರ್ಕಾರಿ ಅಧಿಕಾರಿಗಳು ಅದರಲ್ಲೂ ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರನ್ನು ಬೆದರಿಸುವ ಘಟನೆಗಳು ನಡೆದಿದ್ದು, ಆ ರೀತಿಯಾಗಿ ಯಾವುದೇ ಘಟನೆ ನಡೆದರೆ ಕೂಡಲೇ ಕಾನೂಕು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ಸಯ್ಯದ್ ರಖೀಬ್ ಎಚ್ಚರಿಕೆ ನೀಡಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ತಾಲೂಕಿನ ಕೆಲ ಗ್ರಾಮಗಳಲ್ಲಿ ಅಂಗನವಾಡಿಗಳಿಗೆ ಅಕ್ರಮವಾಗಿ ಪ್ರವೇಶಿಸಿರುವ ಕೆಲ ಖಾಸಗಿ ವ್ಯಕ್ತಿಗಳು ವಿನಾಕಾರಣ ಕಾರ್ಯಕರ್ತೆಯರ ಬಳಿ ದಾಖಲಾತಿಗಳನ್ನು ಕೇಳವುದು ಕೊಡದಿದ್ದರೆ ಅವರ ಹಾಗೂ ಪುಠಾಣಿ ಮಕ್ಕಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಮಾಡುತ್ತಿರುವ ಬಗ್ಗೆ ಲಿಖಿತ ದೂರುಗಳು ಬಂದಿವೆ. ಯಾರಿಗಾದರೂ ದಾಖಲೆಗಳು ಬೇಕಾದರೆ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿ ಪಡೆಯಲು ಅವಕಾಶವಿದೆ. ಅದನ್ನು ಬಿಟ್ಟು ದಾಖಲಾತಿಗಳನ್ನು ಪರಿಶೀಲಿಸುವ ಹಕ್ಕು ಖಾಸಗಿ ವ್ಯಕ್ತಿಗಳಿಗೆ ಇರುವುದಿಲ್ಲ. ಆದ್ದರಿಂದ ಇಲಾಖೆಯ ಯಾರೂ ಸಹ ಖಾಸಗಿ ವ್ಯಕ್ತಿಗಳಿಗೆ ಹೆದರಿ ದಾಖಲೆಗಳನ್ನು ನೀಡಬಾರದು. ಒಂದು ವೇಳೆ ಒತ್ತಡ ಹೇರಿದಲ್ಲಿ ಆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ, ಲೋಪ ಆಗದಂತೆ ನಿರ್ವಹಿಸಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಸಮರ್ಪಕವಾಗಿ ಕರ್ತವ್ಯ ನಿರ್ವಹಣೆ ಮಾಡುವುದರ ಮೂಲಕ ಇಲಾಖೆಯ ಎಲ್ಲಾ ಯೋಜನೆಗಳ ಸೌಲಭ್ಯ ಸದ್ಬಳಿಕೆ ಹಾಗೂ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಿಳಿಸಲಾಗಿದೆ. ಇದನ್ನು ನಿರ್ಲಕ್ಷಿಸಿ ,ಕರ್ತವ್ಯ ಲೋಪ, ಬೇಜವಾಬ್ದಾರಿತನ, ದುರುಪಯೋಗ ಕಂಡುಬಂದಲ್ಲಿ ಅಂತವರ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದಾಗಿ ಅವರು ಎಚ್ಚರಿಸಿದ್ದಾರೆ.