ಅಧಿಕಾರ ಬಳಸಿಕೊಂಡು ಅಕ್ರಮ ತಡೆಗಟ್ಟಿ

| Published : Jan 21 2025, 12:33 AM IST

ಸಾರಾಂಶ

ನಾಲೆ, ನದಿ, ಜಲಾಶಯಗಳ ಮಾರ್ಗದಲ್ಲಿ ಕಾನೂನು ಬಾಹಿರವಾಗಿ ನೀರಿನ ಕೊಳವೆ ಹಾಕುವುದನ್ನು ತಡೆಯಲು ಜಲಸಂಪನ್ಮೂಲ ಇಲಾಖೆ ರೂಪಿಸಿರುವ ನಿಯಮ ಇನ್ನೆರಡು ವಾರದಲ್ಲಿ ಜಾರಿ

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ನೀರಾವರಿ ಅಧಿನಿಯಮ 1965ಕ್ಕೆ ತಿದ್ದುಪಡಿ ತಂದು ರಾಜ್ಯಪಾಲರಿಂದ ಅನುಮೋದನೆಗೊಂಡಿದೆ. ಇನ್ನೆರಡು ವಾರದಲ್ಲಿ ನೂತನ ನಿಯಮಗಳು ಜಾರಿಗೆ ಬರಲಿವೆ ಎಂದು ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ವಿಶ್ವನಾಥ್ ರೆಡ್ಡಿ ಹೇಳಿದರು.ನಗರದ ಮೈಸೂರು ಬಿಲ್ಡರ್ಸ್‌ ಅಸೋಸಿಯೇಷನ್‌ ಚಾರಿಟಬಲ್‌ ಟ್ರಸ್ಟ್‌ ಸಭಾಂಗಣದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024 ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ನಾಲೆ, ನದಿ, ಜಲಾಶಯಗಳ ಮಾರ್ಗದಲ್ಲಿ ಕಾನೂನು ಬಾಹಿರವಾಗಿ ನೀರಿನ ಕೊಳವೆ ಹಾಕುವುದನ್ನು ತಡೆಯಲು ಜಲಸಂಪನ್ಮೂಲ ಇಲಾಖೆ ರೂಪಿಸಿರುವ ನಿಯಮ ಇನ್ನೆರಡು ವಾರದಲ್ಲಿ ಜಾರಿಯಾಗಲಿದ್ದು, ಅಧಿಕಾರಿಗಳು ತಮಗಿರುವ ಅಧಿಕಾರ ಬಳಸಿಕೊಂಡು ಅಕ್ರಮ ತಡೆಗಟ್ಟಬೇಕು ಎಂದರು.ಹೊಸ ನಿಯಮಗಳನ್ನು ಅಳವಡಿಸಿಕೊಳ್ಳುವುದರಿಂದ ಹಲವು ತಪ್ಪು ತಡೆಯಬಹುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅವಕಾಶವಿದೆ ಎಂದು ತಿಳಿಸಿದರು.ಅಧಿಕಾರಿಗಳಿಗೆ ಅಧಿನಿಯಮದ ತಿದ್ದುಪಡಿ ಆಗಿದೆ ಮತ್ತು ಆಗಿಲ್ಲ, ಎಷ್ಟು ಅಂಶಗಳು ಎಷ್ಟು ಗೊತ್ತಿದೆ ಎನ್ನುವುದು ಮುಖ್ಯ. ಆದ್ದರಿಂದ ಕಾರ್ಯಾಗಾರ ನಡೆಸಲಾಗುತ್ತಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುವಾಗ ಕಾಯಿದೆ ಮತ್ತು ನಿಯಮ ಮುಖ್ಯ. ಸಾಮಾಜಿಕ ವ್ಯವಸ್ಥೆಯು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಲು ನಿರ್ದಿಷ್ಟ ಪದ್ದತಿ ಅನುಸರಿಸಬೇಕು ಎಂದರು.ನೀರಾವರಿ ಕಾಯಿದೆ ಮೊದಲಿನಿಂದಲೂ ಇದೆ. ಆದರೆ, ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋದ ವೇಳೆ ದಾರಿ ಉದ್ದಕ್ಕೂ ಪೈಪ್ ಒಡೆದರೆ ಕೊನೆಯ ಭಾಗಕ್ಕೆ ನೀರು ತಲುಪಲ್ಲ ಎನ್ನುವುದು ಕಂಡುಬಂದಿತು. ಈ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ ಇಂತಹ ತಪ್ಪುಗಳು ನಡೆದರೆ ಕ್ರಮಕೈಗೊಳ್ಳುವ ಅಧಿಕಾರ ಇಲ್ಲದಿರುವುದು ಗೊತ್ತಾಯಿತು. ಹಾಗಾಗಿ, ನಿಯಮಕ್ಕೆ ತಿದ್ದುಪಡಿ ತಂದು ಅಧಿಕಾರ ನೀಡಬೇಕು ಎಂದು ಕರಡು ರಚನೆ ಮಾಡುವ ಹೊತ್ತಿಗೆ ಸರ್ಕಾರದ ಅವಧಿ ಮುಗಿದು ಹೋಗಿತ್ತು.ನಂತರ ಡಿ.ಕೆ. ಶಿವಕುಮಾರ್ ಅವರೇ ಉಪ ಮುಖ್ಯಮಂತ್ರಿ ಜತೆಗೆ ಮತ್ತೊಮ್ಮೆ ಜಲ ಸಂಪನ್ಮೂಲ ಸಚಿವರಾಗಿದ್ದರಿಂದ ಮತ್ತೆ ಕೈಗೆತ್ತಿಕೊಂಡು ತಿದ್ದುಪಡಿಮಾಡಲು ನಿರ್ಧರಿಸಲಾಯಿತು. ಅಧಿಕಾರ ಕೊಡದಿದ್ದರೆ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಉಪ ಮುಖ್ಯಮಂತ್ರಿಗಳು ಕಾನೂನು ಇಲಾಖೆ ಅಭಿಪ್ರಾಯದಂತೆ ಹದಿನಾಲ್ಕು ಇಲಾಖೆಗಳ ಸಮ್ಮತಿ ಪಡೆದು ಕರಡು ರಚಿಸಲಾಯಿತು. ಈಗ ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಅಂಗೀಕಾರಗೊಂಡು ರಾಜ್ಯಪಾಲರಿಂದ ಒಪ್ಪಿಗೆ ದೊರೆತಿದೆ. ಈಗ ಅಧಿಕಾರ ಚಲಾಯಿಸಲು ಅವಕಾಶ ಹೊಂದಿರುವ ಕಾರಣ ಇನ್ನೆರಡು ವಾರದಲ್ಲಿ ನಿಯಮಗಳು ಜಾರಿಗೆ ಬರಲಿದ್ದು, ತಪ್ಪು ಎಸಗದಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದಾಗಿದೆ ಎಂದರು.ಕರ್ನಾಟಕ ನೀರಾವರಿ ಅಧಿನಿಯಮ- 2024 ಮುನ್ನುಡಿ ಮತ್ತು ಅವಲೋಕನ ಕುರಿತು ಉಪ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ. ಜೈಪ್ರಕಾಶ್, ಅಧಿನಿಯಮದ ಪ್ರಮುಖಾಂಶಗಳು ಕುರಿತು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಂಪನಿ ಕಾರ್ಯದರ್ಶಿ ಎಂ.ಎಸ್. ಗಿರೀಶ್, ಅರೆ ನ್ಯಾಯಾಂಗ ಕಾರ್ಯ ವಿಧಾನ ಕುರಿತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸುನಿಲ್ ಹೆಗಡೆ ವಿಷಯ ಮಂಡಿಸಿದರು.ಉಪ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ ಕೆ. ಜೈಪ್ರಕಾಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ಆರ್.ಎಲ್. ವೆಂಕಟೇಶ್, ನೀರಾವರಿ ಇಲಾಖೆ ಮುಖ್ಯ ಎಂಜಿನಿಯರ್ಬಿ.ಎನ್. ಫಣಿರಾಜ್, ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ ಎಲ್. ಸುಜಾತಾ, ಜಾಧವ್, ಕರ್ನಾಟಕ ಎಂಜಿನಿಯರ್ಸಂಶೋಧನಾ ಸಂಸ್ಥೆ ನಿರ್ದೇಶಕ ಕೆ.ಜಿ. ಮಹೇಶ್, ಹೇವಾವತಿ ಯೋಜನಾ ವಲಯ ಮುಖ್ಯ ಎಂಜಿನಿಯರ್ಸ್‌ ಜಿ.ಸಿ. ಮಂಜುನಾಥ್, ಸಣ್ಣ ನೀರಾವರಿ ಮತ್ತು ಅಂತರ್ಜಲ ವೃತ್ತ ಅಧೀಕ್ಷಕ ಎಂಜಿನಿಯರ್ಪ್ರಶಾಂತ್ ಬಿ. ಗಡದಾನಪ್ಪ ಗೋಳ್, ಕಾಡಾ ಆಡಳಿತಾಧಿಕಾರಿ ಶಿವಮಹದೇವಯ್ಯ ಇದ್ದರು.