ನರೇಗಾ ಕೆಲಸಕ್ಕಾಗಿ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

| Published : Feb 01 2025, 12:01 AM IST

ಸಾರಾಂಶ

ಬೀಳಗಿ ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ಎರಡ್ಮೂರು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವದ್ಧಿ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಸತಾಯಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಬೀಳಗಿ

ತಾಲೂಕಿನ 9 ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ಎರಡ್ಮೂರು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವದ್ಧಿ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಕೆಲಸ ನೀಡದೆ ಸತಾಯಿಸುತ್ತಿದ್ದಾರೆ ಮತ್ತು ಜಾಬ್ ಕಾರ್ಡ್‌ಗಳನ್ನು ಸರಿಯಾಗಿ ಮಾಡಿಕೊಡುತ್ತಿಲ್ಲ ಎಂದು ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಜಿಲ್ಲಾ ಸಂಚಾಲಕ ಮಾಹಾಂತೇಶ ಹೊಸಮನಿ ಆರೋಪಿಸಿದ್ದಾರೆ.

ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ನೂರಾರು ಕೂಲಿ ಕಾರ್ಮಿಕರು ಪಿಡಿಒ ವಿರುದ್ಧ ಘೋಷಣೆ ಕೂಗುತ್ತಾ ತಾಲೂಕು ಪಂಚಾಯಿತಿ ಕಾರ್ಯಾಲಯದ ಎದುರು ಆಗಮಿಸಿ ಸಂಜೆ 5ರವರೆಗೆ ನಡೆದ ಪ್ರತಿಭಟನೆ ನೆಡೆಸಿ, ನಮಗೆ ಪಿಡಿಒಗಳಿಂದ ಲಿಖಿತ ಉತ್ತರವಾಗಿ ಕೆಲಸದ ಭರವಸೆ ಸಿಗುವವರಿಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಆಗ್ರಹಿಸಿದರು.ತಾಲೂಕಿನ ನಾಗರಾಳ, ಕಂದಗಲ್ಲ, ತೆಗ್ಗಿ, ಕಾತರಕಿ, ಜಾನಮಟ್ಟಿ, ಅರಕೇರಿ, ಅನಗವಾಡಿ, ಹೊನ್ನಿಹಾಳ, ಹೆರಕಲ್ಲ ಗ್ರಾಪಂ ಅಭಿವದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಕೂಲಿಕಾರ್ಮಿಕರನ್ನು ಸಮಸ್ಯೆಗಳ ಸಂಕೋಲೆಗೆ ನೂಕಿದೆ. ಕೆಲವು ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ನೀಡಿದರು ಅಳತೆಯಲ್ಲಿ ಮೋಸಮಾಡಿ ಕಡಿಮೆ ಕೂಲಿ ಹಾಕುವ ಕೂಲಿ ಕಳ್ಳರು ಎಂದು ಪಿಡಿಒಗಳ ಮೇಲೆ ಕಿಡಿಕಾರಿದರು.

ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರಾದ ಸವಿತಾ ತೆಗ್ಗಿ ಮಾತನಾಡಿ, ನಾವು ಇಲ್ಲಿಯವರೆಗೆ ಹಲವಾರು ಬಾರಿ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು, ಅವುಗಳಿಗೆ ಪ್ರಾಮುಖ್ಯತೆ ನೀಡದೆ ಕಸದ ಬುಟ್ಟಿಗೆ ಎಸೆದಿದ್ದಾರೆ. ಈಗ 10 ದಿನಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಲಿಖಿತವಾಗಿ ಪತ್ರ ನೀಡಿದ್ದಾರೆ. ಬರುವ 10 ದಿನಗಳಲ್ಲಿ ನಮ್ಮ ಸಮಸ್ಯಗಳಿಗೆ ಸ್ಪಂದಿಸದಿದ್ದರೆ ಸಾವಿರಾರು ಜನರು ಕೂಡಿ ಉಗ್ರ ಹೋರಾಟ ಮಾಡುತ್ತವೆ ಎಂದು ಎಚ್ಚರಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಭಯಕುಮಾರ ಮೊರಬ ಮಾತನಾಡಿ, ಒಂಬತ್ತು ಜನ ಗ್ರಾಮ ಪಂಚಾಯಿತಿಗಳಲ್ಲಿ ಅಭಿವದ್ಧಿ ಅಧಿಕಾರಿಗಳಿಂದ ಒಂಬತ್ತು ಗ್ರಾಪಂಗಳಲ್ಲಿ ತಾವು ನೀಡಿರುವ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದೆ. ಲಿಖಿತ ರೂಪದಲ್ಲಿ ತೆಗೆದುಕೊಂಡಿದ್ದೇನೆ. ಅಲ್ಲದೆ ನಾವು ಕೂಡಾ ಈ ಗ್ರಾಪಂ ಅಧಿಕಾರಿಗಳು ನೀಡಿರುವ ಹತ್ತು ದಿನಗಳಲ್ಲಿ ತಾವುಗಳು ನೀಡಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ಪಿಡಿಒಗಳಿಗೆ ಪಂಚಾಯಿತಿಗೆ ಆಗಮಿಸಿದ ಸಾರ್ವಜನಿಕರೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಿ ಅವರು ನಮ್ಮ ಗುಲಾಮರಲ್ಲ ನಾವೆಲ್ಲ ಇರುವುದೇ ಅವರ ಸೇವೆಗೆ ಎಂದು ಎಚ್ಚರಿಸಿ, ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನಿಗಾವಹಿಸಿ ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಕ್ಕು ಪುಚಗುಂಡಿ, ರವಿ ತೆಗ್ಗಿ, ಅಂಜನಾ ಗೂಡನ್ನವರ, ಶಿಲ್ಪಾ ಗೂಡನ್ನವರ, ಈರಮ್ಮ ತಳವಾರ, ರವೀಂದ್ರ ಕಾಡನ್ನವರ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಮಹಿಳೆಯರು ಆಗಮಿಸಿದ್ದರು.

ಕೂಲಿ ಕಾರ್ಮಿಕರ ಬೇಡಿಕೆಗಳೇನು?

ಕೂಲಿ ಕಾರ್ಮಿಕರ ಬೇಡಿಕೆಗಳಾದ ಜಾಬ್ ಕಾರ್ಡ್‌ ಸೂಕ್ತ ಸಮಯಕ್ಕೆ ನೀಡಬೇಕು. ಅಧಿಕಾರಿಗಳು ಕೂಲಿ ಕಾರ್ಮಿಕರ ಸಮಸ್ಯಗಳಿಗೆ ಸ್ಪಂದಿಸಬೇಕು. ರೇಷನ್ ಕಾರ್ಡ್‌ ಇಲ್ಲವೆಂದು ಕೆಲಸದ ಜಾಬ್ ಕಾರ್ಡ್‌ ವಿತರಣೆ ನಿಲ್ಲಿಸಬಾರದು. ಮಹಿಳೆಯರು ಮಾಡುವ ಮಾಡುವ ಕೆಲಸವನ್ನೆ ನೀಡಬೇಕು, ಅದು ಬಿಟ್ಟು ಕಲ್ಲು ಎತ್ತುವ ಕೆಲಸ ಮಾಡುವುದರಿಂದ ಆರೋಗ್ಯ ಸಮಸ್ಯೆ ಆಗುತ್ತದೆ ಎನ್ನುವುದು ಅರಿಯಬೇಕು. ಗುಂಪುಗಳ ಕೆಲಸವನ್ನು ನಿರ್ಲಕ್ಷ್ಯ ಮಾಡದೇ ಅಧಿಕಾರಿಗಳು ಕಾರ್ಮಿಕರೊಂದಿಗೆ ಅಸಡ್ಡೆ ತೋರಿಸಬಾರದು ಎಂದು ತಮ್ಮ ಬೇಡಿಕೆ ಹೇಳಿಕೊಂಡರು.