ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ: ಡಾ. ಶೈಲೇಂದ್ರ ಬೆಲ್ದಾಳೆ

| Published : Jun 14 2024, 01:09 AM IST

ಸಾರಾಂಶ

ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಹೊಂದಿರುವೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಕಾಮಗಾರಿಗಳನ್ನು ಮುಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುತ್ತಿದೆ ಎಂದು ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಔರಾದ್ (ಎಸ್)ದಲ್ಲಿ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಬೀದರ್ ದಕ್ಷಿಣ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಯೇ ನನ್ನ ರಾಜಕೀಯ ಜೀವನದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳು ಒಂದೊಂದಾಗಿ ಈಡೇರಿಸಲಾಗುತ್ತಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಔರಾದ್ (ಎಸ್) ಗ್ರಾಮದಲ್ಲಿ ಸುಮಾರು 34 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಬೀದರ್ ದಕ್ಷಿಣ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸು ಹೊಂದಿದ್ದೇನೆ. ಅಭಿವೃದ್ಧಿ ಮಾಡಲು ನನ್ನದೇ ಆದ ನೀಲ ನಕ್ಷೆ ಹೊಂದಿದ್ದು, ಹಂತ, ಹಂತವಾಗಿ ಎಲ್ಲವೂ ಕಾರ್ಯರೂಪಕ್ಕೆ ಬರಲಿವೆ ಎಂದರು.

ಈ ಭಾಗದ ದೇವಸ್ಥಾನಗಳಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರಿ ನಿವಾಸ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮವಾಗಿ ಪೂರ್ಣಗೋಳಿಸಬೇಕು. ಅಧಿಕಾರಿಗಳು ಸಹ ಕಾಮಗಾರಿ ಮೂಗಿಯುವವರೆಗೂ ಕಾಮಗಾರಿ ಮೇಲೆ ನಿಗಾ ವಹಿಸಬೇಕೆಂದರು.

ಈಗಾಗಲೇ ವಿವಿಧ ಕಡೆ ರಸ್ತೆ, ಚರಂಡಿ, ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಕಾಮಗಾರಿಗಳನ್ನು ಮುಗಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುತ್ತಿದೆ ಎಂದರು.

ನಮ್ಮ ಕಚೇರಿಗೆ ಬಂದ ದೂರುಗಳಿಗೆ ತಕ್ಷಣ ಸ್ಪಂದಿಸಲಾಗುತ್ತಿದೆ. ಗ್ರಾಮದಲ್ಲಿ ಯಾವುದೇ ಮೂಲ ಸೌಕರ್ಯ ಸಮಸ್ಯೆ ಎದುರಾದರೆ ಗ್ರಾಮಸ್ಥರು ನಮ್ಮ ಕಚೇರಿಗೆ ಅಥವಾ ನನಗೆ ಸಂಪರ್ಕಿಸಿ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರೆತೆಯಾಗದಂತೆ ಅಧಿಕಾರಿಗಳು ಸಹ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆ ಪ್ರತಿಯೊಂದು ಗ್ರಾಮದಲ್ಲಿ ಚರಂಡಿ ಹಾಗೂ ಕುಡಿಯುವ ನೀರಿನ ಟ್ಯಾಂಕರ್‌ ಸ್ವಚ್ಛತೆಗೆ ಸೂಚನೆ ನೀಡಲಾಗಿದೆ. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಪ್ರಾರಂಭವಾಗಿದೆ ಯಾವ ಗ್ರಾಮದಲ್ಲಿ ಸ್ವಚ್ಛತೆ ನಡೆದಿಲ್ಲವೋ ಅಂತಹ ಗ್ರಾಮದ ಮಾಹಿತಿ ನಮ್ಮ ಕಚೇರಿಗೆ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಾಬಾದ, ಸುರೇಶ ಮಾಶೆಟ್ಟಿ, ಜಗನ್ನಾಥ ಪಾಟೀಲ, ಶ್ರೀನಿವಾಸ ಪೋದ್ದಾರ, ಘಾಳೆಪ್ಪಾ ಚಟ್ಟನಳ್ಳಿ, ಬಸವರಾಜ ಪವಾರ, ವಿಜಯಕುಮಾರ ಗಣಪುರ, ಅನೀಲಕುಮಾರ ಗುನ್ನಳ್ಳಿ, ಓಂಕಾರ ಮಜಗೆ, ಕುಪೇಂದ್ರ, ಧನರಾಜ ಪೋಶೆಟ್ಟಿ, ವೀರೇಶ ಶಂಭು, ಪ್ರವೀಣ ತರಿ, ಗ್ರಾಮದ ಮುಖಂಡರಾದ ನರಸಿಂಹ ರೆಡ್ಡಿ, ನಾಗಶೆಟ್ಟಿ ಚಟ್ಟನಳ್ಳಿ, ಬಾಲರೆಡ್ಡಿ ಚಿನ್ನಾರೆಡ್ಡಿ, ಸಂಗ್ರಾಮ ಶೆಟಕಾರ, ವೆಂಕಟರೆಡ್ಡಿ, ಜಗನ್ನಾಥ ರಾಮಪುರೆ, ಶಿವರಾಜ ಕೋಳಿ ಮತ್ತಿತರರು ಉಪಸ್ಥಿತರಿದ್ದರು.