ಸಾರಾಂಶ
ನಗರಸಭೆ ಕಚೇರಿ ಮುಂಭಾಗ ಶುಕ್ರವಾರ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ನ ವತಿಯಿಂದ ವರ್ಕ್‌ಶಾಪ್ ಧ್ವಂಸಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಯಾವುದೇ ನೋಟಿಸ್ ನೀಡದೇ ಏಕಾಏಕಿ ನಗರಸಭೆ ಅಧಿಕಾರಿಗಳು ದೌರ್ಜನ್ಯದಿಂದ ಮಂಜುನಾಥ ಇoಜಿನಿಯರಿಂಗ್ ವರ್ಕ್ ಶಾಪನ್ನು ಧ್ವಂಸಗೊಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಕಾರ್ಮಿಕರು ಶುಕ್ರವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.ಪಟ್ಟಣದ ಹುಳಿಯಾರು ರಸ್ತೆಯಲ್ಲಿನ ಅದೇ ಸ್ಥಳದಲ್ಲಿ 1982ರಿಂದಲೂ ಇಂಜಿನಿಯರಿಂಗ್ ವರ್ಕ್ಸ್ ನಡೆಸಿಕೊಂಡು ಬಂದಿದ್ದು, ಸದರಿ ಇಂಜಿನಿಯರಿಂಗ್ ವರ್ಕ್ಸ್ ನಡೆಸಲು ತಾಲೂಕು ಕೈಗಾರಿಕಾ ಕೇಂದ್ರದ ಶಾಶ್ವತ ನೋಂದಣಿ ಪ್ರಮಾಣ ಪತ್ರ ಪಡೆಯಲಾಗಿದೆ. ಹಿರಿಯೂರು ನಗರಸಭೆಯಿಂದಲೂ ಪರವಾನಗಿ ಪಡೆದಿದ್ದು, ಇದುವರೆಗೂ ಯಾವುದೇ ಅವಘಡಗಳಿಲ್ಲದಂತೆ ಕೆಲಸ ನಿರ್ವಹಿಸಲಾಗಿದೆ. ಆದರೆ ದಿನಾಂಕ 28-02-2024ರಂದು ಇಂಜಿನಿಯರಿಂಗ್ ವರ್ಕ ಮಂಜುನಾಥ್‌ರವರಿಗೆ ಯಾವುದೇ ನೋಟಿಸ್ ನೀಡದೇ ನಗರಸಭೆ ಸಿಬ್ಬಂದಿಗಳು ಸದರಿ ವರ್ಕ್ ಶಾಪ್ ಅನ್ನು ಸಂಪೂರ್ಣ ಕಿತ್ತು ಹಾಕಿದ್ದಾರೆ.ಇದರಿಂದ ವರ್ಕ್ ಶಾಪ್‌ನ ಮಾಲೀಕರಿಗೆ ತುಂಬಾ ನಷ್ಟವಾಗಿದ್ದು, ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರಸಭೆಯ ಮುಂದಿನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಾಜೇಶ್ ಕುಮಾರ್‌ರವರು ಮನವಿ ಪಡೆದು ಪರಿಶೀಲಿಸುವ ಭರವಸೆ ನೀಡಿದ ಮೇಲೆ ಕಾರ್ಮಿಕ ಸಂಘಟನೆಗಳವರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಕಾರ್ಯಕರ್ತರು, ನಗರದ ವೆಲ್ಡಿಂಗ್ ಮಾಲೀಕರು ಮತ್ತು ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.