ಸಾರಾಂಶ
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಮಾದಿಗ ಸಮುದಾಯದ ಮುಖಂಡರಾಗಲಿ, ಕಾರ್ಯಕರ್ತರನ್ನಾಗಲಿ ಕಾಂಗ್ರೆಸ್ ಲೆಕ್ಕಕ್ಕೆ ಇಟ್ಟಿಲ್ಲ. ಚುನಾವಣೆಯಲ್ಲಿ ಟಿಕೆಟ್ ನೀಡುವದಾಗಲಿ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವದಾಗಲಿ ಮಾಡದೇ ಕಡೆಗೆಣಿಸಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವದು
ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿನ ಮಾದಿಗ ಸಮುದಾಯದ ಮುಖಂಡರಾಗಲಿ, ಕಾರ್ಯಕರ್ತರನ್ನಾಗಲಿ ಕಾಂಗ್ರೆಸ್ ಲೆಕ್ಕಕ್ಕೆ ಇಟ್ಟಿಲ್ಲ. ಚುನಾವಣೆಯಲ್ಲಿ ಟಿಕೆಟ್ ನೀಡುವದಾಗಲಿ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವದಾಗಲಿ ಮಾಡದೇ ಕಡೆಗೆಣಿಸಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವದು ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ 2023ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾದಿಗ ಸಮುದಾಯದವರಿಗೆ ಒಂದೇ ಒಂದು ಟಿಕೇಟ್ ನೀಡಲಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿಯಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಮಾದಿಗ ಸಮುದಾಯದ ಯಾರೊಬ್ಬರನ್ನೂ ನೇಮಕ ಮಾಡದೆ ಈ ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮಾದಿಗ ಸಮುದಾಯದವರನ್ನು ಕೇವಲ ಮತ ಹಾಕಿಸಿಕೊಳ್ಳುವುದಕ್ಕೆ ಮಾತ್ರ ಬಳಸಿಕೊಳ್ಳುತ್ತಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸರ್ಕಾರ ಬೀದಕ್ ಜಿಲ್ಲೆಯ ಮಾದಿಗ ಸಮಾಜದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯರನ್ನಾಗಿಯೂ ಮಾಡಲಿಲ್ಲ. ರಾಜ್ಯದಲ್ಲಿಯೂ ಸಮುದಾಯಕ್ಕೆ ತಕ್ಕ ಹಾಗೆ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡಿಲ್ಲ. ಆದರೂ ಮಾದಿಗ ಸಮಾಜ ಕಣ್ಮುಚ್ಚಿ ಹಲವು ದಶಕಗಳಿಂದ ಕಾಂಗ್ರೆಸ್‌ಗೆ ಮತ ಹಾಕುತ್ತ ಬಂದಿದೆ ಎಂದರು. ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅವರನ್ನು ಬಿಟ್ಟು ಪಕ್ಷ ಹೊಸಬರಿಗೆ ಮಣೆ ಹಾಕಿದೆ. ಇದು ಖಂಡನೀಯ. ಕಾಂಗ್ರೆಸ್ ಅಧಿಕಾರ ನೀಡುವದಿರಲಿ ಬ್ಯಾನರ್‌ಗಳಲ್ಲಿಯೂ ನಮ್ಮ ಫೋಟೋ ಹಾಕುತ್ತಿಲ್ಲ, ಸರ್ಕಾರ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ವಿಜಯಕುಮಾರ ಹಿಪ್ಪಳಗಾಂವ್, ಕಮಲಾಕರ ಎಲ್. ಹೆಗಡೆ, ಪೀಟರ್ ಚಿಟ್ಟಗುಪ್ಪ, ದತ್ತಾತ್ರಿ ಜ್ಯೋತಿ, ಜೈಶೀಲ ಕಲವಾಡೆ, ಜೈಶೀಲ ಮೇತ್ರೆ, ವಿರಶೆಟ್ಟಿ, ಸಚಿನ ಅಂಬೇಸಾಂಗವೆ, ರವಿ ಸೂರ್ಯವಂಶಿ, ಗೋರಖ ಜೋಶಿ, ದೀಪಕ ಸೂರ್ಯವಂಶಿ, ಓಂಕಾರ ನೂರ, ಲಾಲಪ್ಪ ನಿರ್ಣಾ, ದಯಾನಂದ ರೇಕುಳಗಿ, ರಾಜು ಸಾಂಗ್ಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.