ಸಾರಾಂಶ
ಕಾರವಾರ: ಇಲ್ಲಿನ ತಾಪಂ ಸಭಾಭವನದಲ್ಲಿ ಇತ್ತೀಚೆಗೆ ಕುಡಿಯುವ ನೀರು ಗುಣಮಟ್ಟ ಪರೀಕ್ಷೆ ಮತ್ತು ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧಪಡಿಸುವ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಶಾಸಕ ಸತೀಶ ಸೈಲ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮನುಷ್ಯನಿಗೆ ಮುಖ್ಯವಾದದ್ದು ನೀರು, ವಿದ್ಯುತ್, ಸಾರಿಗೆಯಾಗಿದೆ. ಅದರಲ್ಲೂ ಅತಿ ಮುಖ್ಯವಾಗಿರುವುದು ನೀರಾಗಿದೆ. ಇದಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ಕಲುಷಿತವಾದಂತಹ ನೀರು ಜನರು ಸೇವಿಸಬಾರದು ಎನ್ನುವ ಉದ್ದೇಶದಿಂದ ಈ ತರಬೇತಿ ಆಯೋಜಿಸಲಾಗಿದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ಬರುತ್ತಿರುವುದರಿಂದ ನೀರಿಗೆ ಸಂಬಂಧಿಸಿದ ರೋಗಗಳು ಹರಡದಂತೆ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪರೀಕ್ಷೆಗಾಗಿ ಈಗಾಗಲೇ ಎಫ್‌ಟಿಕೆ ಕಿಟ್ ವಿತರಣೆ ಮಾಡಲಾಗಿದೆ. ಅವುಗಳನ್ನು ಬಳಸಿಕೊಂಡು ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಪಂ ಸಿಬ್ಬಂದಿ ವರ್ಗದವರಿಗೆ ಎಫ್‌ಟಿಕೆ ಕಿಟ್ ಬಳಸಿಕೊಂಡು ಕುಡಿಯುವ ನೀರಿನ ಗುಣಮಟ್ಟವನ್ನು ಹೇಗೆ ಪರೀಕ್ಷೆ ಮಾಡಬೇಕು ಎನ್ನುವುದರ ಬಗ್ಗೆ ಪ್ರಯೋಗಾತ್ಮಕ ತರಬೇತಿಯಲ್ಲಿ ನೀಡಲಾಯಿತು.ಜಿಪಂ ಆಡಳಿತ ವಿಭಾಗದ ಉಪಕಾರ್ಯದರ್ಶಿ ನಾಗೇಶ ರಾಯ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ ಬಿ.ವಿ., ಕಾರ್ಯಪಾಲಕ ಅಭಿಯಂತರ ರಾಜೀವ ನಾಯ್ಕ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಪಿ. ಬಾಂದೇಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ. ಸತೀಶ್ ಮತ್ತಿತರರು ಇದ್ದರು.