ಸಾರಾಂಶ
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೆಲ್ತ್ ಕೇರ್ ಆವರಣದಲ್ಲಿ ನಿರ್ಮಿಸಿರುವ ಕ್ಯಾನ್ಸರ್ ಕೇರ್ ಬ್ಲಾಕ್ ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಕನ್ನಡಪಪ್ರಭ ವಾರ್ತೆ ಶಿವಮೊಗ್ಗ
ಹೆಚ್ಚಿನ ಚಿಕಿತ್ಸೆಗೆ ದೂರದ ನಗರಗಳಿಗೆ ಹೋಗುವ ಬದಲು ಶಿವಮೊಗ್ಗದಲ್ಲೇ ಉತ್ತಮ ಹಾಗೂ ಅತ್ಯಾಧುನಿಕ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು ಸಿಗುವಂತಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ನಗರದ ಸಹ್ಯಾದ್ರಿ ನಾರಾಯಣ ಹೆಲ್ತ್ ಕೇರ್ ಆವರಣದಲ್ಲಿ ನಿರ್ಮಿಸಿರುವ ಕ್ಯಾನ್ಸರ್ ಕೇರ್ ಬ್ಲಾಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ತಂದೆ ಬಿ.ಎಸ್.ಯಡಿಯೂರಪ್ಪನವರ ಕನಸು ನನಸಾಗಿತ್ತು. ಆ ನಿಟ್ಟಿನಲ್ಲಿ ನಾರಾಯಣ ಆಸ್ಪತ್ರೆ ಸೇರಿದಂತೆ ನಗರದಲ್ಲಿ ಹಲವಾರು ಖಾಸಗಿ ಆಸ್ಪತ್ರೆಗಳು ಉತ್ತಮ ಸೇವೆಯನ್ನು ಒದಗಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಶಿವಮೊಗ್ಗದಲ್ಲಿ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಪರಿಕಲ್ಪನೆ ಇತ್ತು. ನಗರದ ತೀರ್ಥಹಳ್ಳಿ ರಸ್ತೆ ಯಲ್ಲಿರುವ ಕಟ್ಟಡದಲ್ಲಿ ಆಸ್ಪತ್ರೆ ನಿರ್ಮಿಸಲು ನಾರಾಯಣ ಹೆಲ್ತ್ ಅಧಿಕಾರಿಗಳು ಒಪ್ಪಿಗೆ ಸೂಚಿಸಿದಾಗಿನಿಂದ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಇದೀಗ ಮುಂದಿನ ಹಂತವಾಗಿ ಸಮಗ್ರ ಕ್ಯಾನ್ಸರ್ ಘಟಕ ಆರಂಭವಾಗಿರುವುದು ಅತ್ಯಂತ ಅನುಕೂಲಕರವಾಗಿದೆ ಎಂದು ತಿಳಿಸಿದರು.ಈ ಹೊಸ ಸೌಲಭ್ಯವು ಕ್ಯಾನ್ಸರ್ ರೋಗ ನಿರ್ಣಯವನ್ನು ಎದುರಿಸುತ್ತಿರುವವರಿಗೆ ಭರವಸೆಯ ದಾರಿದೀಪವನ್ನು ನೀಡುತ್ತದೆ ಎಂದು ಕ್ಯಾನ್ಸರ್ ಕೇರ್ ಬ್ಲಾಕ್ ಸ್ಥಾಪನೆಯನ್ನು ಶ್ಲಾಘಿಸಿದರು.
ನಾರಾಯಣ ಹೆಲ್ತ್ ಕೇರ್ ಸಂಸ್ಥಾಪಕ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಈ ಅತ್ಯಾಧುನಿಕ ಸೌಲಭ್ಯವು ಸುಧಾರಿತ ತಂತ್ರಜ್ಞಾನ ಮತ್ತು ನುರಿತ ಅನುಭವಿತಜ್ಞ ವೈದ್ಯರ ತಂಡವನ್ನು ಒಂದೇ ಸೂರಿನಡಿ ತರಲಾಗಿದೆ. ರೋಗ ನಿರ್ಣಯ ಮತ್ತು ಚಿಕಿತ್ಸೆಯ ಯೋಜನೆಯಿಂದ ಹಿಡಿದು ವಿಕಿರಣ ಆಂಕೊಲಾಜಿ, ವೈದ್ಯಕೀಯ ಆಂಕೊಲಾಜಿ, ಶಸ್ತ್ರಚಿಕಿತ್ಸಾ ಆಂಕೊಲಾಜಿ ಮತ್ತು ಪ್ರಿವೆಂಟಿವ್ ಆಂಕೊಲಾಜಿ ಸೇರಿದಂತೆ ವಿಶೇಷ ಈ ಎಲ್ಲಾ ಆರೈಕೆಗಳಿಂದ, ರೋಗಿಗಳು ತಮ್ಮ ಆರೈಕೆಗೆ ಸಮಗ್ರ ವಿಧಾನದಿಂದ ಪ್ರಯೋಜನ ಪಡೆಯ ಬಹುದು ಎಂದರು.ಗ್ರೂಪ್ ಸಿಇಒ ಡಾ.ಇಮ್ಯಾನುಯೆಲ್ ರೂಪರ್ಟ್ ಮಾತನಾಡಿ, ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೋಗಿಗಳಿಗೆ ತಡೆರಹಿತ ಮತ್ತು ಪರಿಣಾಮಕಾರಿ ಚಿಕಿತ್ಸಾ ಪ್ರಯಾಣವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕ್ಯಾನ್ಸರ್ ಕೇರ್ ಬ್ಲಾಕ್ ಅನ್ನು ಉದ್ಘಾಟಿಸಿದರು. ನಾರಾಯಣ ಹೆಲ್ತ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ವೀರೇನ್ ಶೆಟ್ಟಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು.