ಎಲ್ಲೆಡೆ ವಿಶ್ವ ಪರಿಸರ ದಿನಾಚರಣೆ ರಂಗು

| Published : Jun 06 2024, 12:31 AM IST

ಸಾರಾಂಶ

ಶಾಲಾ ಮಕ್ಕಳು ತರತರಹದ ಚಟುವಟಿಕೆಗಳಾದ ಪ್ಲಾಸ್ಟಿಕ್ ಬಳಕೆಯ ನಿಷೇಧಕ್ಕಾಗಿ ಹಳೆಯ ಉಡುಪುಗಳ ಮೂಲಕ ಚೀಲ ತಯಾರಿಕೆ ಹಾಗೂ ಮಕ್ಕಳು ಪರಿಸರ ಕುರಿತು ಜಾಗೃತಿ ಮೂಡಿಸಿದರು.

ಹುಬ್ಬಳ್ಳಿ:

ವಿಶ್ವ ಪರಿಸರ ದಿನದ ಅಂಗವಾಗಿ ಬುಧವಾರ ಎಲ್ಲೆಡೆ ಹಸಿರಿನ ರಂಗು ಕಂಡುಬಂದಿತು. ವಿವಿಧೆಡೆ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಲಾಯಿತು.

ನಗರದ ಸರ್ಕಾರಿ, ಖಾಸಗಿ ಕಚೇರಿ ಹಾಗೂ ಸಂಘ-ಸಂಸ್ಥೆ ಮತ್ತು ಶಾಲಾ-ಕಾಲೇಜುಗಳಲ್ಲಿ ಪರಿಸರ ದಿನ ಆಚರಿಸಿದರು. ಈ ವೇಳೆ ಪರಿಸರ ಪ್ರೇಮಿಗಳು ಹಾಗೂ ಗಣ್ಯರು ಪರಿಸರ ಉಳಿಸಿ- ಬೆಳೆಸುವ ಕುರಿತು ಉಪನ್ಯಾಸ ಮತ್ತು ಭಾಷಣದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಹು-ಧಾ ವಾರ್ಡ್ ಸಮಿತಿ ಬಳಗ ಹಾಗೂ ಜೆಎಸ್‌ಎಸ್ ಸಕ್ರಿ ಲಾ ಕಾಲೇಜು ಜಂಟಿಯಾಗಿ ಬುಧವಾರ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದರು. ಕಾಲೇಜಿನ ಆವರಣದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿ ಚನ್ನು ಹೊಸಮನಿ ಚಾಲನೆ ನೀಡಿ ಮಾತನಾಡಿದರು. ವಾರ್ಡ್‌ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡ ಶೆಟ್ಟರ್ ಕಾನೂನು ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಕುರಿತು ಪ್ರಮಾಣ ವಚನ ಬೋಧಿಸಿಸಿದರು. ಪ್ರಾಚಾರ್ಯೆ ಡಾ. ರೂಪಾ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ದೀಪಾ ಪಾಟೀಲ್ , ಶಿವಶಂಕರ ಐಹೊಳೆ ಸೇರಿದಂತೆ ಹಲವರಿದ್ದರು.

ವಾಯವ್ಯ ಸಾರಿಗೆ ಕೇಂದ್ರ ಕಚೇರಿ:

ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸಸಿ ನೆಟ್ಟರು. ಮುಖ್ಯ ಸಂಚಾರ ವ್ಯವಸ್ಥಾಪಕ ವಿವೇಕಾನಂದ ವಿಶ್ವಜ್ಞ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ.ನಾಯಕ, ಮುಖ್ಯ ಯಾಂತ್ರಿಕ ಅಭಿಯಂತರ ಬಸವರಾಜ ಅಮ್ಮನವರ, ಸಿಬ್ಬಂದಿಗಳಾದ ವಿಜಯಶ್ರೀ ನರಗುಂದ, ದಿವಾಕರ ಯರಗುಪ್ಪ, ಜಗದಂಬಾ ಕೋಪರ್ಡೆ ಇದ್ದರು.

ಜೆಎಸ್‌ಎಸ್:

ಇಲ್ಲಿನ ಉಣಕಲ್ ಬಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಶಾಲಾ ಮಕ್ಕಳೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು. ಶಾಲಾ ಮಕ್ಕಳು ತರತರಹದ ಚಟುವಟಿಕೆಗಳಾದ ಪ್ಲಾಸ್ಟಿಕ್ ಬಳಕೆಯ ನಿಷೇಧಕ್ಕಾಗಿ ಹಳೆಯ ಉಡುಪುಗಳ ಮೂಲಕ ಚೀಲ ತಯಾರಿಕೆ ಹಾಗೂ ಮಕ್ಕಳು ಪರಿಸರ ಕುರಿತು ಜಾಗೃತಿ ಮೂಡಿಸಿದರು. ನಂತರ ವಿವಿಧ ಬಗೆಯ ಸಸಿ ನೆಡುವ ಮೂಲಕ ಸಂಭ್ರಮಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ರಜನಿ ಪಾಟೀಲ್, ಶಾಲೆಯ ಸಹ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.