ಮೊದಲ ಪ್ರಯತ್ನದಲ್ಲೇ ವಿಶ್ವ ದಾಖಲೆ ಗಮನಾರ್ಹ: ಸ್ವಪ್ನಿಲ್ ಬಣ್ಣನೆ

| Published : Nov 10 2025, 12:30 AM IST

ಮೊದಲ ಪ್ರಯತ್ನದಲ್ಲೇ ವಿಶ್ವ ದಾಖಲೆ ಗಮನಾರ್ಹ: ಸ್ವಪ್ನಿಲ್ ಬಣ್ಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಗುರುನಾನಕ್‌ ಪಬ್ಲಿಕ್ ಸ್ಕೂಲ್ ವತಿಯಿಂದ ಅತಿ ಹೆಚ್ಚು 5434 ವಿದ್ಯಾರ್ಥಿಗಳು ಭಾಗವಹಿಸುವುದರೊಂದಿಗೆ ರೂಬಿಕ್ಸ್ ಕ್ಯೂಬ್‌ನ್ನು ಪರಿಹರಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮೂಲಕ ಇತಿಹಾಸ ಸೃಷ್ಠಿಸಿದೆ.

ಕನ್ನಡಪ್ರಭ ವಾರ್ತೆ ಬೀದರ್

ಇಲ್ಲಿನ ಗುರುನಾನಕ್‌ ಪಬ್ಲಿಕ್ ಸ್ಕೂಲ್ ವತಿಯಿಂದ ಅತಿ ಹೆಚ್ಚು 5434 ವಿದ್ಯಾರ್ಥಿಗಳು ಭಾಗವಹಿಸುವುದರೊಂದಿಗೆ ರೂಬಿಕ್ಸ್ ಕ್ಯೂಬ್‌ನ್ನು ಪರಿಹರಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮೂಲಕ ಇತಿಹಾಸ ಸೃಷ್ಠಿಸಿದೆ.

ನಗರದ ನೆಹರು ಕ್ರೀಡಾಂಗಣ ಬಳಿಯ ಗುರುನಾನಕ್ ಪಬ್ಲಿಕ್ ಶಾಲೆ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಗುರುನಾನಕ್‌ ದೇವ್ ಇಂಜಿನೀಯರಿಂಗ್ ಕಾಲೇಜ್‌ನ ಕ್ರೀಡಾಂಗಣದಲ್ಲಿ ಭಾನುವಾರ ರೂಬಿಕ್ಸ್ ಕ್ಯೂಬ್ ಪರಿಹಾರ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಈ ಗಮನಾರ್ಹ ಸಾಧನೆಯನ್ನು 3997 ವಿದ್ಯಾರ್ಥಿಗಳು ಭಾಗವಹಿಸುವುದರೊಂದಿಗೆ 2018ರಲ್ಲಿ ಚೆನ್ನೈನ ಶಾಲೆಯೂ ಸಾಧಿಸಿದ್ದು, ಹಿಂದಿನ ದಾಖಲೆಯನ್ನು ಏಳು ವರ್ಷಗಳ ನಂತರ ಗುರುನಾನಕ್‌ ಪಬ್ಲಿಕ್ ಸ್ಕೂಲ್‌ ಮೀರಿಸಿದೆ.

ಈ ಕಾರ್ಯಕ್ರಮವನ್ನು ಗಿನ್ನಿಸ್ ದಾಖಲೆಯ ಪ್ರತಿನಿಧಿ ಸ್ವಪ್ನಿಲ್ ಅವರು ಅಧಿಕೃತವಾಗಿ ನಿರ್ಣಯಿಸಿದರು. ಅವರು ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದನ್ನು ದೃಢಪಡಿಸಿದರು.

ಸ್ವಪ್ನಿಲ್ ಮಾತನಾಡಿ, ಗಿನ್ನಿಸ್ ವಿಶ್ವ ದಾಖಲೆ ಮಾಡಬೇಕಾದರೆ ಹಿಂದಿನ ದಾಖಲೆ ಮುರಿಯಬೇಕಾಗುತ್ತದೆ. ಒಮ್ಮೆ ಪ್ರಯತ್ನ ಮಾಡಬೇಕು ಅದರಲ್ಲಿ ಸಫಲತೆ ಕಾಣದಿದ್ದರೆ ಇನ್ನೊಮ್ಮೆ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಇಲ್ಲಿನ ಗುರುನಾನಕ್‌ ಶಾಲೆಯವರು ಮೊದಲನೆಯ ಪ್ರಯತ್ನದಲ್ಲಿಯೇ ವಿಶ್ವ ದಾಖಲೆ ಸೃಷ್ಟಿ ಮಾಡಿರುವುದು ಗಮನಾರ್ಹ ಎಂದು ನುಡಿದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಮಾತನಾಡಿ, ಈ ಜಾಗತಿಕ ಮೈಲಿಗಲ್ಲನ್ನು ಸಾಧಿಸುವಲ್ಲಿ ಸಮರ್ಪಣೆ ಮತ್ತು ತಂಡದ ಕೆಲಸಕ್ಕಾಗಿ ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಭಾಗವಹಿಸುವವರನ್ನು ಅಭಿನಂದಿಸಿದರು.

ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ಅವರು ಸಂಸ್ಥೆಯ ಸಮೂಹಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾನಕ್‌ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ. ಎಸ್.ಬಲಬೀರ್ ಸಿಂಗ್, ಎಸ್. ಪುನಿತ್ ಸಿಂಗ್, ಎಸ್. ಪವಿತ್ ಸಿಂಗ್, ಆಡಳಿತಾಧಿಕಾರಿ ಎಸ್.ಆರ್.ಡಿ.ಸಿಂಗ್, ಗುರು ನಾನಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.