ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣರೋಗ ದಿನಾಚರಣೆ

| Published : Jun 21 2024, 01:01 AM IST

ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣರೋಗ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣರೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ, ಭಾರತೀಯ ತೈಲ ನಿಗಮ ಭಾರತೀಯ ವಿಜ್ಞಾನ ಸಂಸ್ಥೆ ಮತ್ತಿತರ ಇಲಾಖೆ, ಸಂಘಟನೆಗಳು ಸಹಯೋಗ ನೀಡಿದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುಡಗೋಲು ಕಣದ ರೋಗದ ಬಗ್ಗೆ ಸಾರ್ವಜನಿಕರು ಹಾಗೂ ಗಿರಿಜನರು ಜಾಗೃತಿ ಹೊಂದಿ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ಎಲ್ಲಾ ಇಲಾಖೆಗಳ ಸಹಕಾರ ಅತೀ ಮುಖ್ಯ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದ್ದಾರೆ.

ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಕುಡಗೋಲು ಕಣರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ, ಭಾರತೀಯ ತೈಲ ನಿಗಮ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಪ್ರಾಜೆಕ್ಟ್ ಚಂದನ, ರಾಜ್ಯ ರಕ್ತಕೋಶ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಸಿಕಲ್‌ಸೆಲ್ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಡಗೋಲು ಕಣ ರೋಗ ಅನುವಂಶಿಕ ಕಾಯಿಲೆಯಾಗಿದೆ. ಇದರಲ್ಲಿ ಕೆಂಪು ರಕ್ತಕಣಗಳು ಕುಡಗೋಲು ಆಕಾರದ ರೂಪವನ್ನು ಪಡೆದು ದೇಹದಲ್ಲಿ ರಕ್ತದ ಚಲನೆ ನಿಧಾನಗೊಳಿಸಿ, ನಿರ್ಭಂಧಿಸಿ, ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದರು.ಹುಟ್ಟಿನಿಂದ ಸಾಯುವವರಗೆ ಕಾಡುವ ರೋಗವಿದು. ಈ ರೋಗ ಹೊಂದಿದವರ ಜೀವಿತಾವಧಿ ಇನ್ನಿತರ ಜನಸಾಮಾನ್ಯರಿಗಿಂತ ಕಡಿಮೆ. ಸರಾಸರಿ 42-48 ವರ್ಷ ಬದುಕಬಹುದು ಎಂದು ತಿಳಿಸಿದರು.

ಆಯಾಸ, ಬ್ಯಾಕ್ಟೀರಿಯಾದ ಸೋಂಕುಗಳು, ಪಾರ್ಶ್ವವಾಯು, ಕಣ್ಣಿನ ಹಾನಿ, ಉರಿಯೂತ, ವಾಸಿಯಾಗದ ಕಾಲಿನ ಹುಣ್ಣು, ತೀವ್ರ ಮೂಳೆನೋವು, ಪದೇಪದೇ ಜ್ವರ, ರಕ್ತಹೀನತೆ, ವಿಳಂಬಿತ ಬೆಳವಣಿಗೆ ಅಥವಾ ಪ್ರೌಢಾವಸ್ಥೆ ಈ ಕಾಯಿಲೆಯ ಲಕ್ಷಣಗಳು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 58 ಸಾವಿರಕ್ಕೂ ಹೆಚ್ಚು ಗಿರಿಜನರಿದ್ದು, ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಬುಡಕಟ್ಟು ಜನಾಂಗದ 10,263 ಜನರನ್ನು ನೋಂದಣಿ ಮಾಡಿದ್ದು, ಇವರಲ್ಲಿ 10,224 ಜನರನ್ನು ತಪಾಸಣೆ ಮಾಡಿದ್ದು, ಇವರಲ್ಲಿ 453 ಕ್ಯಾರಿಯರ್‌ಗಳು ಕಂಡುಬಂದಿದ್ದು, 34 ಪ್ರಕರಣಗಳು ಕುಡುಗೋಲು ಕಣದ ಕಾಯಿಲೆ ಪ್ರಕರಣಗಳೆಂದು ದೃಢಪಟ್ಟಿರುತ್ತವೆ.

ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಥವಾ ಸಂಬಂಧಿಕರಿಗೆ ಈ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿಯಿಂದ ರಕ್ತಪರೀಕ್ಷೆ ಮಾಡಿಸಿ ಪತ್ತೆಹಚ್ಚಬಹುದು ಎಂದರು.

ಗಿರಿಜನ ಅಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯಲ್ಲಿ 58 ಸಾವಿರಕ್ಕೂ ಹೆಚ್ಚಿನ ಗಿರಿಜನರಿದ್ದು, ಇವರಿಗೆ ಕುಡಗೋಲು ಕಣ ರೋಗ ತಪಾಸಣೆ ಮಾಡಿಸಿಕೊಳ್ಳಲು ಸಹಕರಿಸಲು ಗಿರಿಜನ ಮುಖಂಡರಲ್ಲಿ ಮನವಿ ಮಾಡಿದರು.

ಗಿರಿಜನ ಸಮುದಾಯದ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಂಕಜಾ, ವನಬನ ವಿಕಾಸ ಕೇಂದ್ರ ಹಾಗೂ ಲ್ಯಾಂಪ್ ನಿರ್ದೇಶಕರಾದ ಪುಷ್ಪ ಜೆ.ಆರ್, ಗಿರಿಜನ ಮುಖಂಡ ರಾಜೀವ್, ನಿತಿನ್ ಸಭೆಯಲ್ಲಿ ಕುಡಗೋಲು ಕಣ ರೋಗ ತಪಾಸಣೆಗೆ ಸಮುದಾಯದಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ವಿಮಲ ಕೆ.ಜಿ ಅವರು ಜಿಲ್ಲೆಯಲ್ಲಿ ವಿಕಲಚೇತನರ ದೃಢೀಕರಣಕ್ಕೆ ಹಾಗೂ ಇಲಾಖೆ ವತಿಯಿಂದ ಲಭಿಸುವ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಪ್ರಾಜೆಕ್ಟ್ ಚಂದನ ಭಾರತೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಸಂಯೋಜಕ ಡಾ.ಕಾವೇರಿ ಅವರು ಮಾತನಾಡಿ, 5- 45 ವರ್ಷದೊಳಗಿನ ಎಲ್ಲಾ ಗಿರಿಜನರು ತಪ್ಪದೇ ಕುಡುಗೋಲು ಕಣರೋಗದ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಾರಂಭದಲ್ಲಿಯೇ ರೋಗ ಪತ್ತೆಹಚ್ಚಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಆರ್ಜಿ ಗ್ರಾ.ಪಂ.ಅಧ್ಯಕ್ಷ ಫಾತೀಮಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ, ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಗೂ 50 ಜನ ಗಿರಿಜನ ಮುಖಂಡರು ಇದ್ದರು.