ಎಲ್ಲ ಕಲೆಗಳ ಜನಕ ರಂಗಭೂಮಿ

| Published : Mar 29 2024, 12:49 AM IST

ಸಾರಾಂಶ

ಕನ್ನಡ ರಂಗಭೂಮಿಯ ಕಲಾವಿದರೆಲ್ಲರೂ ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿದ್ದಾರೆ. ರಂಗಕಲಾವಿದರಿಗೆ ಮಾಶಾಸನ ಸೇರಿದಂತೆ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಮಿಸಿ, ಸಮಾಜದ ಓರೆಕೋರೆಗಳ ತಿದ್ದುವ ಕಾರ್ಯದಲ್ಲಿ ರಂಗಭೂಮಿಯ ಪಾತ್ರ ಹಿರಿದಾಗಿದೆ. ಸಮಾಜದ ಸಮಸ್ಯೆಗಳಿಗೆ ತನ್ನ ಪ್ರಯೋಗಗಳ ಮೂಲಕ ಪರಿಹಾರ ಒದಗಿಸಿಕೊಟ್ಟು, ಎಲ್ಲ ಕಲೆಗಳನ್ನೂ ಅಭಿವ್ಯಕ್ತಗೊಳಿಸುವ ರಂಗಭೂಮಿ ಎಲ್ಲ ಕಲೆಗಳ ಜನಕವಾಗಿದೆ ಎಂದು ಡಾ.ಎಚ್.ಎಸ್.ಘಂಟಿ ಹೇಳಿದರು.

ಅವರು ಬುಧವಾರ ಗುಳೇದಗುಡ್ಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜರುಗಿದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ರಂಗಭೂಮಿ ಕಲಾವಿದರು ವೈಯಕ್ತಿಕ ಬದುಕಿನಲ್ಲಿ ಅನೇಕ ಕಷ್ಟಗಳಿದ್ದರೂ ಅದನ್ನು ಬದಿಗೊತ್ತಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ, ಸಾಹಿತಿ ಡಾ.ಸಿ.ಎಂ.ಜೋಶಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕನ್ನಡ ರಂಗಭೂಮಿಯ ಕಲಾವಿದರೆಲ್ಲರೂ ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿದ್ದಾರೆ. ರಂಗಕಲಾವಿದರಿಗೆ ಮಾಶಾಸನ ಸೇರಿದಂತೆ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಇದರಿಂದ ಅವರ ಆರ್ಥಿಕ ಗುಣಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ. ಅನೇಕ ದಶಕಗಳಿಂದ ರಂಗಭೂಮಿಯನ್ನೇ ನೆಚ್ಚಿಕೊಂಡು ಬದುಕಿದ ಹಲವಾರು ಕುಟುಂಬಗಳಿಂದ ಬೀದಿಗೆ ಬಂದಿವೆ. ಅವುಗಳ ಸಂರಕ್ಷಣೆ ಅತ್ಯಂತ ಜವಾಬ್ದಾರಿಯುತವಾಗಿದೆ. ಇಂತಹ ರಂಗಭೂಮಿ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಗೌರವಿಸುವ ಕಾರ್ಯಗಳು ಇನ್ನೂ ಹೆಚ್ಚೆಚ್ಚು ಆಗಬೇಕಿದೆ ಎಂದು ಹೇಳಿದರು.

ದೊಡ್ಡಾಟ ಕಲಾವಿದ ಶ್ರಿಕಾಂತ ಹುನಗುಂದ, ರಂಗ ವ್ಯವಸ್ಥಾಪಕ ಸುರೇಶ ಸಾರಂಗಿ ಮಾತನಾಡಿ, ನಾವೆಲ್ಲರೂ ಇಂದು ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಮಯವನ್ನು ಕಳೆಯುತ್ತಿರುವುದರಿಂದ ನಾಟಕ ಮತ್ತಿತರ ರಂಗಕಲೆಗಳ ಕಡೆಗಿನ ಆಸಕ್ತಿ ಕ್ಷೀಣಿಸುತ್ತಿದೆ. ಹಾಗಾಗಿ ರಂಗಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ಹಿರಿಯ ರಂಗಕಲಾವಿದರಾದ ಗಣೇಶ ಉಣಚಗಿ, ಶಿವಾನಂದ ಹಿರಾಳ, ಈರಣ್ಣ ಜವಳಗಿ, ಶಿವಪುತ್ರಪ್ಪ ಸಾರಂಗಿ, ಸಿದ್ದಪ್ಪ ಹಾಲಿಗೇರಿ ಇವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ರಂಗಕರ್ಮಿ ಡಾ.ಭೀಮನಗೌಡ ಪಾಟೀಲ, ಮೋಹನ ಕರನಂದಿ, ರಂಗಭೂಮಿ ಕಲಾವಿದೆ ಜ್ಯೋತಿ ಗುಳೇದಗುಡ್ಡ, ಮಹೇಶ ಶೆಬಿನಕಟ್ಟಿ, ವಿಠ್ಠಲ ಬದಿ, ಯಲ್ಲಪ್ಪ ಮನ್ನಿಕಟ್ಟಿ, ಸುಭಾಸ ಶಿಂಧೆ, ಸಚಿನ ರಾಂಪೂರ, ಈರಣ್ಣ ಅಲದಿ, ಸೇರಿದಂತೆ ಇನ್ನೂ ಅನೇಕರು ಇದ್ದರು.