ವಿಶ್ವ ರಂಗಭೂಮಿ ದಿನಾಚರಣೆ: 27ರಂದು ನಾಟಕ ಪ್ರದರ್ಶನ

| Published : Mar 23 2025, 01:32 AM IST

ವಿಶ್ವ ರಂಗಭೂಮಿ ದಿನಾಚರಣೆ: 27ರಂದು ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ. 27ರಂದು ಹಿರೇಕೆರೂರು ಪಟ್ಟಣದ ಗುರುಭವನದಲ್ಲಿ ಮಲಮಗಳು ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ ಹೇಳಿದರು.

ಹಿರೇಕೆರೂರು: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ. 27ರಂದು ಪಟ್ಟಣದ ಗುರುಭವನದಲ್ಲಿ ಇಳಕಲ್ ತಾಲೂಕು ರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ಹಾಗೂ ತಾಲೂಕು ಕಸಾಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಹಿರೇಕೆರೂರು ಲಯನ್ಸ್‌ ಪರಿವಾರದ ಸಹಯೋಗದಲ್ಲಿ ಮಲಮಗಳು ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಭೂಮಿ ಅಳಿವಿನ ಅಂಚಿನಲ್ಲಿದ್ದು, ರಂಗಭೂಮಿ ಕಲಾವಿದರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಅಲ್ಲದೇ ಇಂದಿನ ಪೀಳಿಗೆಗೆ ರಂಗಭೂಮಿ ಕಲೆಯ ಮಹತ್ವ ತಿಳಿಸುವುದು ಅವಶ್ಯಕವಾಗಿದೆ. ಆಧುನಿಕ ವಿದ್ಯುನ್ಮಾನ ಯುಗದ ಕಲೆಗೆ ರಂಗಭೂಮಿ ಆಧಾರಸ್ತಂಭ ಎಂಬುದನ್ನು ತಿಳಿಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸಿ ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯ ಮಾಡುವ ಉದ್ದೇಶ ಇದಾಗಿದೆ ಎಂದರು.

ಇಳಕಲ್ಲಿನ ರಂಗಸಂಗಮ ಅಧ್ಯಕ್ಷೆ ರೇಷ್ಮಾ ಅಳವಂಡಿ ಮಾತನಾಡಿ, ಅನೇಕ ಕಲಾವಿದರು ತಮ್ಮ ಜೀವನವನ್ನೇ ಕಲಾಸೇವೆಗೆ ಮುಡಿಪಾಗಿಡುತ್ತಾರೆ. ಅಂತಹ ಕಲಾವಿದರ ಬದುಕು ಕಷ್ಟಕರವಾಗಿದೆ. ಕಲಾವಿದರ ಬದುಕಿಗೆ ಆಸರೆಯಾಗುವಂತಹ ಹೃದಯವಂತರು ಬೇಕಾದ್ದಾರೆ ಎಂದರು.

ಲಯನ್ಸ್‌ ಪರಿವಾರದ ಅಧ್ಯಕ್ಷ ಜಿ.ಪಿ. ಪ್ರಕಾಶಗೌಡ ಮಾತನಾಡಿ, ಹಿಂದಿನ ಕಾಲದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಜಾತ್ರೆ, ತೇರು ಬಂದರೆ ನಾಟಕ ಪ್ರದರ್ಶನ ಇರುತ್ತಿತ್ತು. ಆದರೆ ಈಗ ಟಿವಿ ಧಾರಾವಾಹಿಗಳ ಹಾವಳಿಯಿಂದ ನಾಟಕಗಳು ಮರೆಮಾಚಿ ಹೋಗಿವೆ. ಇಂದಿನ ನಮ್ಮ ಮಕ್ಕಳಿಗೆ ರಂಗ ಕಲೆಯ ಬಗ್ಗೆ ತಿಳಿಸುವ ಸಲುವಾಗಿ ಇಂತಹ ಪ್ರದರ್ಶನಗಳನ್ನು ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಪಂ ಅಧ್ಯಕ್ಷೆ ಸುಧಾ ಚಿಂದಿ, ಕಸಾಪ ಗೌರವಾಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿ ಪಿ.ಎಸ್. ಸಾಲಿ, ಮಂಜುನಾಥ ಕಳ್ಳಿಹಾಳ, ಪಿ.ಬಿ. ನಿಂಗನಗೌಡ್ರ, ಕುಮಾರ ಪುಟ್ಟಪ್ಪಗೌಡ್ರ, ಎಂ.ಬಿ. ಹಾದಿಮನಿ, ಬಿ.ವಿ. ಸೊರಟೂರ, ರಾಮನಗೌಡ ತೆಂಬದ, ಜ್ಯೋತಿ ಜಾಧವ, ಮಂಜುನಾಥ ಶಿವನಕ್ಕನವರ, ಭಾರತಿ ದಾವಣಗೇರಿ, ಗುರುಶಾಂತಪ್ಪ ಜೋಗಿಹಳ್ಳಿ ಇದ್ದರು.