ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಭಾರತದಲ್ಲಿ ಜೈನ ಸಮುದಾಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ನವಗ್ರಹ ತೀರ್ಥಕ್ಷೇತ್ರ ಹೊಂದಿರುವ ತಾಲೂಕಿನ ವರೂರು ಈಗ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗುತ್ತಿದೆ. ಇದೇ ತೀರ್ಥಕ್ಷೇತ್ರದಲ್ಲಿ 2 ವರ್ಷಗಳಲ್ಲಿ ಪ್ರಪಂಚದ ಮೊದಲ ಪದ್ಮಾವತಿ ದೇವಿಯ ಶಕ್ತಿಪೀಠ ನಿರ್ಮಾಣ ಮಾಡಲಾಗುತ್ತಿದ್ದು, ಫೆ. 28ರಂದು ಶಿಲಾನ್ಯಾಸ ನೆರವೇರಲಿದೆ.ನವಗ್ರಹ ಜೈನ ದೇವಾಲಯ ಅಥವಾ ನವಗ್ರಹ ತೀರ್ಥಕ್ಷೇತ್ರ ಜೈನ ಸಮಾಜದ ಪ್ರಮುಖ ಯಾತ್ರಾಸ್ಥಳ. ಇಲ್ಲಿ 61 ಅಡಿ ಎತ್ತರದಲ್ಲಿ ಶ್ರೀ 1008 ಭಗವಾನ್ ಪಾರ್ಶ್ವನಾಥರ ಎತ್ತರದ ಏಕಶಿಲೆಯ ವಿಗ್ರಹ ಮತ್ತು ಇತರ 8 ಜೈನ ತೀರ್ಥಂಕರರಾದ ಪದ್ಮಪ್ರಭು, ಚಂದ್ರಪ್ರಭು, ಮಲ್ಲಿನಾಥ, ಪುಷ್ಪದಂತ, ವಾಸುಪೂಜ್ಯ, ಮಹಾವೀರ, ಮುನಿಸುವ್ರತ, ನೇಮಿನಾಥರ ಸಣ್ಣ ಪ್ರತಿಮೆಗಳು ಸ್ಥಾಪಿಸಲಾಗಿದೆ.
ಪದ್ಮಾದೇವಿಯ ಶಕ್ತಿಪೀಠ ಸ್ಥಾಪನೆಈಗ ಇದೇ ತೀರ್ಥಕ್ಷೇತ್ರದಲ್ಲಿ ಶ್ರೀ ಪದ್ಮಾವತಿ ದೇವಿಯ ಸುಂದರ ಮಂದಿರ ನಿರ್ಮಾಣಕ್ಕೆ ಫೆ. 28ರಂದು ಅಡಿಗಲ್ಲು ಹಾಕಲಾಗುತ್ತಿದೆ. ಹಿಂದು ಧರ್ಮದಲ್ಲಿ ದುರ್ಗೆ, ಪಾರ್ವತಿ ಹಾಗೂ ಶಕ್ತಿ ದೇವತೆಗಳ ಆರಾಧನೆ ಮಾಡುವಂತೆ ಜೈನ ಧರ್ಮದಲ್ಲಿ ಶ್ರೀ ಪದ್ಮಾವತಿ ದೇವಿಯ ಆರಾಧನೆ ಮಾಡಲಾಗುತ್ತದೆ. ಹೀಗಾಗಿ ನವಗ್ರಹ ತೀರ್ಥ ಕ್ಷೇತ್ರದಲ್ಲಿ 5 ಎಕರೆ ಪ್ರದೇಶದಲ್ಲಿ ಪ್ರಪಂಚದಲ್ಲಿಯೇ ಅತೀ ದೊಡ್ಡ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ.
1 ಎಕರೆ ಪ್ರದೇಶದಲ್ಲಿ ಮಂದಿರವರೂರಿನಲ್ಲಿ 1 ಎಕರೆ ಪ್ರದೇಶದಲ್ಲಿ ತಮಿಳುನಾಡು ಮೂಲದ ಶಿಲ್ಪಿಯೊಬ್ಬರು ಈ ಸುಂದರ ಶಕ್ತಿಪೀಠವನ್ನು ನಿರ್ಮಾಣ ಮಾಡಲು ಗುತ್ತಿಗೆ ಪಡೆದುಕೊಂಡಿದ್ದು, ಕಾರ್ಕಳದ ಗ್ರಾನೈಟ್ ಶಿಲೆಯನ್ನು ಬಳಸಿ ಧಾತು ರಹಿತವಾಗಿ ಕೆತ್ತನೆ ಮಾಡಲಿದ್ದಾರೆ. ದೇವಸ್ಥಾನದ ಕೆತ್ತನೆಗಾಗಿಯೇ ಸುಮಾರು ₹1.68 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳಲು 2 ವರ್ಷ ಬೇಕಾಗಲಿದೆ.
ಎಲ್ಲ ವರ್ಗದವರಿಗೂ ಅವಕಾಶವರೂರು ತೀರ್ಥಕ್ಷೇತ್ರ ಕೇವಲ ಜೈನ ಸಮಾಜ ಬಾಂಧವರಿಗೆ ಪ್ರಮುಖ ಶ್ರದ್ಧಾಕೇಂದ್ರವಾಗಿರದೇ ಎಲ್ಲ ಜಾತಿ, ಸಮಾಜದ ಜನರು ತೀರ್ಥಕ್ಷೇತ್ರಕ್ಕೆ ಬರುವಂತಾಗಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ನವಗ್ರಹ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪಿಸುವುದರೊಂದಿಗೆ ಪ್ರಮುಖ ಯಾತ್ರಿಸ್ಥಳವನ್ನಾಗಿಸಿಲಾಗಿದ್ದು, ಇದರೊಂದಿಗೆ ಈಗ ಪದ್ಮಾವತಿ ದೇವಿಯ ಶಕ್ತಿಪೀಠ ಸ್ಥಾಪಿಸುವ ಮೂಲಕ ಎಲ್ಲ ವರ್ಗದ ಜನರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಧರ್ಮ, ಜಾತಿ ಎನ್ನದೇ ಎಲ್ಲರೂ ಆಗಮಿಸಿ ಶಕ್ತಿಪೀಠದ ದರ್ಶನ ಪಡೆದು ಇಲ್ಲಿನ ತೀರ್ಥಂಕರರ ಚರಿತ್ರೆ ತಿಳಿದುಕೊಳ್ಳುವಂತಾಗಲಿ ಎಂಬುದು ಈ ಶಕ್ತಿಪೀಠ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ ಎಂದು ಜೈನಗುರು ಗುಣಧರನಂದಿ ಮಹಾರಾಜರು ಕನ್ನಡಪ್ರಭಕ್ಕೆ ತಿಳಿಸಿದರು.ಶ್ರೀರಾಮನಿಗೆ ಬಳಸಿದ ಶಿಲೆಯ ಬಳಕೆ
ಈಚೆಗೆ ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತನೆಗೆ ಮೈಸೂರಿನ ಎಚ್.ಡಿ. ಕೋಟೆಯ ಕೃಷ್ಣಶಿಲೆಯನ್ನೇ ಬಳಸಲಾಗಿತ್ತು. ಇದೇ ಶಿಲೆಯಲ್ಲಿಯೇ ಈಗ ಪದ್ಮಾವತಿದೇವಿಯ 3 ಅಡಿ ಎತ್ತರದ ಮೂರ್ತಿ ಕೆತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಮೆರಿಕ ಮೂಲದ ಭಕ್ತರಾದ ಸುನೀಲ ಕೊಟಾಡಿಯಾ ಎಂಬುವವರು ದೇವಿಯ ವಿಗ್ರಹದ ಕೆತ್ತನೆಯ ಖರ್ಚು ನೋಡಿಕೊಳ್ಳುತ್ತಿದ್ದಾರೆ.ಸುಂದರ ಮಂದಿರ
ಜೈನ ಸಮುದಾಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ನವಗ್ರಹ ತೀರ್ಥಕ್ಷೇತ್ರದಲ್ಲಿ ಪದ್ಮಾವತಿದೇವಿ ಶಕ್ತಿಪೀಠ ಸ್ಥಾಪನೆ ಮಾಡಬೇಕೆಂಬುದು ಹಲವು ವರ್ಷಗಳ ಸಂಕಲ್ಪವಾಗಿತ್ತು. ಈಗ ಫೆ. 28ರಂದು ಇದಕ್ಕೆ ಶಿಲನ್ಯಾಸ ನೆರವೇರಿಸಲಿದ್ದು, 2 ವರ್ಷಗಳಲ್ಲಿ ಸುಂದರ ಮಂದಿರ ನಿರ್ಮಾಣವಾಗಲಿದೆ ಎಂದು ಗುಣಧರ ನಂದಿ ಮಹಾರಾಜರು ತಿಳಿಸಿದರು.