ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಂತುಹುಳು ಬಾಧೆಯಿಂದ ಮಕ್ಕಳನ್ನು ರಕ್ಷಿಸಲು ಜಂತುಹುಳು ನಿವಾರಣೆ ಮಾತ್ರೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನವನಗರದ ಸೆಕ್ಟರ್ ನಂ.43 ರಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ರಾಷ್ಟ್ರೀಯ ಜಂತುಳು ನಿವಾರಣೆ ದಿನಾಚರಣೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಸಾಮೂಹಿಕವಾಗಿ ಅಲ್ಬೆಂಡೆಜೋಲ್ ಮಾತ್ರೆ ನುಂಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಂತು ಹುಳು ನಿರ್ಮೂಲನೆಯಿಂದ ಮಕ್ಕಳು ಸೇವಿಸುವ ಪೌಷ್ಟಿಕ ಆಹಾರ ಮಕ್ಕಳ ದೇಹಕ್ಕೆ ಲಭ್ಯವಾಗುತ್ತದೆ. ಜಂತುಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೆ ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟಕ್ಕೆ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್. ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದ ನಿಮಿತ್ತ 1-19 ವರ್ಷದೊಳಗಿನ ಎಲ್ಲ ಅಂಗನವಾಡಿ ಕೇಂದ್ರ, ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿದಂತೆ ಕಾಲೇಜು ಮಕ್ಕಳಿಗೆ ಉಚಿತವಾಗಿ ಜಂತು ಹುಳು ನಿವಾರಣೆಗೆ ಮಾತ್ರೆ ನೀಡಲಾಗುತ್ತಿದೆ. ತರಗತಿಗಳಿಗೆ ಗೈರು ಹಾಜರಾದ ಮಕ್ಕಳಿಗೆ ಮತ್ತೆ ಫೆ.16ರಂದು ಮಾಪ್ ಅಪ್ ದಿನ ಮಾತ್ರೆ ನೀಡಲಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ರಾಜಕುಮಾರ ಯರಗಲ್ಲ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರ, ಆರ್.ಕೆ.ಎಸ್ಕೆ ಕಾರ್ಯಕ್ರಮ ಸಂಯೋಜಕ ವಿವೇಕ ಬೆಂಡಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.