ಸಾರಾಂಶ
ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಧರ್ಮದ ಕಾಲಂ 1ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ 218ರಲ್ಲಿ ಹಿಂದೂ ಬ್ರಾಹ್ಮಣ ಎಂತಲೂ ಬರೆಸಬೇಕು. ಉಪ ಜಾತಿ ಕಾಲಂನಲ್ಲಿ ಏನೂ ಬರೆಯುವ ಅವಶ್ಯಕತೆ ಇಲ್ಲ ಎಂದು ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರಾವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಧರ್ಮದ ಕಾಲಂ 1ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ 218ರಲ್ಲಿ ಹಿಂದೂ ಬ್ರಾಹ್ಮಣ ಎಂತಲೂ ಬರೆಸಬೇಕು. ಉಪ ಜಾತಿ ಕಾಲಂನಲ್ಲಿ ಏನೂ ಬರೆಯುವ ಅವಶ್ಯಕತೆ ಇಲ್ಲ ಎಂದು ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರಾವ್ ತಿಳಿಸಿದರು.ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಸಮೀಕ್ಷೆಯಲ್ಲಿ ಸೂಚಿಸಿದ ಎಲ್ಲ 60 ಕಾಲಂಗಳನ್ನು ತಾಳ್ಮೆಯಿಂದ, ಸರಿಯಾಗಿ ನೋಡಿಕೊಂಡು ಭರ್ತಿ ಮಾಡಬೇಕು. ಮಾತೃಭಾಷೆ ಕಾಲಂನಲ್ಲಿ ಕನ್ನಡ ಎಂದೂ, ಇತರ ಭಾಷೆ ಕಾಲಂನಲ್ಲಿ ಸಂಸ್ಕೃತ ಎಂದೂ ನಮೂದಿಸಬೇಕು ಎಂದು ಮನವಿ ಮಾಡಿದರು.
ವಾಸ್ತವವಾಗಿ ರಾಜ್ಯದಲ್ಲಿ ಸುಮಾರು 65 ಲಕ್ಷ ಬ್ರಾಹ್ಮಣರು ಇದ್ದಾರೆ. ಆದರೆ ಕಳೆದ ಸಮೀಕ್ಷೆಯಲ್ಲಿ ಕೇವಲ 14 ಲಕ್ಷ ಬ್ರಾಹ್ಮಣರು ಇದ್ದಾರೆ ಎಂದು ವರದಿಯಲ್ಲಿ ನಮೂದಿಸಲಾಗಿದೆ. ವರದಿಯಾಗಿದೆ. ಈ ಬಾರಿ ಹೀಗಾಗಬಾರದು. ಗಣತಿ ಸಮೀಕ್ಷೆಗೆ ಬಂದಾಗ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಯನ್ನು ಸಿದ್ಧಪಡಿಸಿಕೊಂಡಿರಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೂತನ ನಿರ್ದೇಶಕ ಪಿ.ಎಂ.ಮಾಲತೇಶ್ ಮಾತನಾಡಿ, ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾಮಾಣಿಕವಾಗಿ ಆಗಬೇಕು ಎಂಬುದು ಸರ್ಕಾರದ ಅಪೇಕ್ಷೆಯಾಗಿದೆ. ಇದು ಜಾತಿ ಸಮೀಕ್ಷೆ ಅಲ್ಲ. ಬ್ರಾಹ್ಮಣರು ಜವಾಬ್ದಾರಿಯಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಕೆ.ಕೇಶವಮೂರ್ತಿ, ಅಚ್ಯುತ ರಾವ್, ಚಂದ್ರಶೇಖರ್, ವನಜಾ ರವಿಕುಮಾರ್, ನಾಗೇಶ್, ಯಜ್ಞನಾರಾಯಣ, ಶ್ರೀನಿವಾಸ್, ವಿಶ್ವನಾಥ್ ಕೆ.ಎನ್., ಸಂತೋಷ ಕುಮಾರ್, ಸವಿತಾ ಮೊದಲಾದವರು ಇದ್ದರು.