ಸಾಹಿತಿಗಳು ಸರ್ಕಾರದ ಆಶ್ರಯದಿಂದ ದೂರವಿರಿ

| Published : Nov 17 2025, 12:15 AM IST

ಸಾರಾಂಶ

ಸರ್ಕಾರದ ಆಶ್ರಯ ಬೇಡುವ, ಪ್ರಶಸ್ತಿಗಾಗಿ ಅರ್ಜಿ ಹಾಕುವ ಮಂದಿ ಹೆಚ್ಚುತ್ತಿದ್ದು, ಸಾಹಿತಿಗಳು, ಕಲಾವಿದರು ಇಂತಹ ಪ್ರಯತ್ನಗಳಿಂದ ದೂರ ಇರುವಂತೆ ನಾಡಿನ ಸಾಮಾಜಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಸರ್ಕಾರದ ಆಶ್ರಯ ಬೇಡುವ, ಪ್ರಶಸ್ತಿಗಾಗಿ ಅರ್ಜಿ ಹಾಕುವ ಮಂದಿ ಹೆಚ್ಚುತ್ತಿದ್ದು, ಸಾಹಿತಿಗಳು, ಕಲಾವಿದರು ಇಂತಹ ಪ್ರಯತ್ನಗಳಿಂದ ದೂರ ಇರುವಂತೆ ನಾಡಿನ ಸಾಮಾಜಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.ತುಮಕೂರಿನ ಕನ್ನಡ ಭವನದಲ್ಲಿ ಬಹುಮುಖಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೂವರು ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಇಂದು ಪ್ರಶಸ್ತಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಸರ್ಕಾರದ ಪ್ರಶಸ್ತಿಗಳಿಗಂತೂ ಅರ್ಥವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು ತುಂಬಾ ಎಚ್ಚರಿಕೆಯಿಂದ ಇರಬೇಕು. ರಾಜಕಾರಣಿಗಳ ಹಿಂದೆ ಬಿದ್ದು ಪ್ರಶಸ್ತಿ ಪಡೆಯುವಂತಾಗಬಾರದು. ಹಾಗೆಯೇ ಕಲಾವಿದರು ಮಾಸಾಶನಕ್ಕೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾ ಓಡಾಡಬಾರದು. ಇದು ನಮ್ಮ ನೈತಿಕತೆಯ ಪ್ರಶ್ನೆ ಎಂದವರು ಎಚ್ಚರಿಸಿದರು.ಸಾಹಿತಿಗಳಿಗೆ, ಕವಿ, ಕಲಾವಿದರಿಗೆ ತಮ್ಮದೇ ಆದ ಒಂದು ಸಾಂಸ್ಕೃತಿಕ ಐತಿಹ್ಯವಿದೆ. ಜನಪರವಾಗಿ ನಿಲ್ಲುವ ಮತ್ತು ಬದುಕುವ ಸಾಮರ್ಥ್ಯವಿದೆ. ಬದುಕಲು ತಮ್ಮದೇ ಆದ ದಾರಿಗಳಿವೆ. ಇಂತಹ ದಾರಿಗಳನ್ನು ಬಿಟ್ಟು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಗೋಗರೆಯುವ ಪ್ರಯತ್ನಗಳನ್ನೇಕೆ ಮಾಡಬೇಕು ಎಂದವರು ತಿಳಿಸಿದರು.ಅರ್ಹರಲ್ಲದವರಿಗೆಲ್ಲ ಎಷ್ಟೋ ಬಾರಿ ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಗುತ್ತಿವೆ. ಇಂತಹ ಸಂದರ್ಭದಲ್ಲಿ ಇಬ್ಬರು ತೀವ್ರ ಮುಜುಗರಕ್ಕೆ ಒಳಗಾಗುತ್ತಾರೆ. ಅದರಲ್ಲಿ ಪ್ರಶಸ್ತಿ ಪ್ರದಾನ ಮಾಡುವವರು ಹಾಗೂ ಅರ್ಹತೆ ಇರುವವರು ಅದರೊಳಗೆ ಸೇರಿಕೊಂಡಾಗ ಮುಜುಗರಕ್ಕೆ ಒಳಗಾಗುತ್ತಾರೆ. ಇದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಗಳಿಗಾಗಿ ಕೆಲವರು ರಾಜಕಾರಣಿಗಳ ಹಿಂದೆ ಬೀಳುತ್ತಾರೆ. ಆತ ಏನೋ ಆಸೆಪಟ್ಟಿದ್ದಾನೆ, ಒಂದು ಕೊಟ್ಟುಬಿಡಿ ಎಂದು ರಾಜಕಾರಣಿಗಳು ಸಂಬಂಧಿಸಿದವರಿಗೆ ತಿಳಿಸುತ್ತಾರೆ. ಹಾಗೆ ಕೊಟ್ಟು ಬಿಡಲು ಅದೇನು ಮಕ್ಕಳಿಗೆ ಕೊಡುವ ಆಟಿಕೆಯ ವಸ್ತುವೆ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕಿ ಹಾಗೂ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ ಮಾತನಾಡಿ, ಕೆಲವು ಸಲ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ತಮ್ಮವರಿಗೆ ಬೇಕೆಂದು ಜಗಳ ನಡೆಯುವ ಸಂದರ್ಭಗಳೂ ಉಂಟು. ಇದಕ್ಕಾಗಿಯೇ ವೈಮನಸ್ಯಗಳು ಉಂಟಾಗುತ್ತಿವೆ. ಕೃತಿ ಆಯ್ಕೆಗಾಗಿಯೇ ಸಮಿತಿಗಳು ರಚನೆಯಾಗುತ್ತವೆ. ಇತ್ತೀಚೆಗೆ ಡಾಕ್ಟರೇಟ್ ಪುರಸ್ಕಾರಗಳು ಸಹ ಹಣಕ್ಕೆ ಬಿಕರಿಯಾಗುತ್ತಿವೆ ಎಂದರು.

ಹಿಂದೆ ಅಮ್ಮನ ಬಗ್ಗೆ ಹೆಚ್ಚು ಗುಣಗಾನಗಳು ನಡೆಯುತ್ತಿದ್ದವು. ಬದಲಾದ ಕಾಲಘಟ್ಟದಲ್ಲಿ ಅಪ್ಪನನ್ನು ನೆನೆಯುವ ಸಂದರ್ಭಗಳು ಹೆಚ್ಚುತ್ತಿವೆ. ಈಗಿನ ಕಾಲಘಟ್ಟದಲ್ಲಿ ತುಂಬಾ ಒತ್ತಡದ ಬದುಕಿನಲ್ಲಿ ಅಮ್ಮನಾದವಳು ಮಕ್ಕಳ ಬಗ್ಗೆ ಮೃದು ಧೋರಣೆ ತಾಳಿ ಅವರನ್ನು ಸಂತೈಸಲು ಸಾಧ್ಯವಾಗದೆ ಇರಬಹುದು. ಇಂತಹ ಸ್ಥಿತಿಯಲ್ಲಿ ಅಪ್ಪನಾದವನು ಮಕ್ಕಳ ಬಗ್ಗೆ ಒಂದಷ್ಟು ಮೃದುತ್ವ ತಾಳುತ್ತಿರುವುದರಿಂದ ಅಪ್ಪನ ಬಗ್ಗೆ ಮಾತನಾಡುವ, ವಿಮರ್ಶಿಸುವ ಬೆಳವಣಿಗೆಗಳು ಹೆಚ್ಚುತ್ತಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿದರು. ಬಹುಮುಖಿ ಗೆಳೆಯರ ಬಳಗದ ಪ್ರಧಾನ ಸಂಚಾಲಕ ವೀರಣ್ಣಗೌಡ ಆಶಯ ನುಡಿಗಳನ್ನಾಡಿ, ಕೌಟುಂಬಿಕ ವ್ಯವಸ್ಥೆ ವಿಘಟನೆಯಾಗುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕವಾಗಿ ಚಿಂತಿಸುವ ಮನಸ್ಸುಗಳು ಬೇಕಿದೆ. ಸಾಂಸ್ಕೃತಿಕ ವಲಯವನ್ನು ಉತ್ತಮಗೊಳಿಸುವ ಮನಸ್ಸುಗಳು ಹೆಚ್ಚಬೇಕಿದೆ. ಮೌಢ್ಯದ ವಿರುದ್ಧ ಮಾತನಾಡಬೇಕಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಬೇಕಿದೆ. ಇದಕ್ಕಾಗಿ ಸಾಹಿತ್ಯ ವಲಯವನ್ನು ಪ್ರೋತ್ಸಾಹಿಸಬೇಕಾಗಿದ್ದು, ಕವಿ, ಕತೆಗಾರರು, ಲೇಖಕರನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ಅಪ್ಪ ಪ್ರಶಸ್ತಿಯ ಮೂಲಕ ಉದಯೋನ್ಮುಖ ಲೇಖಕರನ್ನು ಹೊರತರುವ, ಅವರನ್ನು ಗೌರವಿಸುವ ಕೆಲಸವನ್ನು ಬಳಗ ಮಾಡುತ್ತಿದೆ ಎಂದರು. ಮೈಸೂರಿನ ಲೇಖಕ ಸತೀಶ್ ಜವರೇಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃತಿಯ ವಿಮರ್ಶೆಗಿಂತ ಹೆಚ್ಚಾಗಿ ವ್ಯಕ್ತಿ ವೈಭವೀಕರಣವಾಗುತ್ತಿದೆ. ಮೌಲ್ಯಗಳು ಮೂಲೆಗುಂಪಾಗುತ್ತಿವೆ. ಇವೆಲ್ಲವನ್ನು ಗಮನಿಸಿ ಜನಮುಖಿ ಬಳಗ ಹೊಸದೊಂದು ಆಯಾಮಕ್ಕೆ ಅಡಿಯಿಟ್ಟಿದ್ದು, ಈ ಬಳಗಕ್ಕೆ ಶುಭವಾಗಲಿ ಎಂದರು.ಅವು ಅಂಗೆ ಕೃತಿಯ ಡಾ.ರವಿಕುಮಾರ್ ನೀಹ, ಹುಣಸೆ ಚಿಗುರು ಮತ್ತು ಇತರೆ ಕತೆಗಳು ಕೃತಿಯ ಲೇಖಕಿ ದೀಪದ ಮಲ್ಲಿ ಹಾಗೂ ಬಣಮಿ ಕೃತಿಯ ಕಪಿಲ ಪಿ. ಹುಮನಾಬಾದ್ ಅವರುಗಳಿಗೆ 2024-25ನೆ ಸಾಲಿನ ಅಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಭಾಜನರಾದ ಮೂವರು ಲೇಖಕರು ಮಾತನಾಡಿದರು. ಕೃತಿಗಳನ್ನು ಕುರಿತು ಲೇಖಕಿ ವಿವೇಕ ಕೆ.ವಿ., ಚಂದ್ರಶೇಖರ ನಿರಂತರ, ಎಂ.ವಿ.ಷಡಕ್ಷರಿ ಮಾತನಾಡಿದರು. ಬಹುಮುಖಿ ಬಳಗದ ಸಂಚಾಲಕ ಮಂಜುನಾಥ್ ದಂಡಿನಶಿವರ, ನಾಗರಾಜು ಎಚ್.ವಿ. ಇತರರು ಮಾತನಾಡಿದರು. ಮತ್ತಿಹಳ್ಳಿ ಗಂಗಣ್ಣ ಪ್ರಾರ್ಥಿಸಿದರು. ತೀರ್ಥಕುಮಾರ್ ಸ್ವಾಗತಿಸಿದರು. ಗೋಪಾಲ್ ಆರ್.ವಿ. ನಿರೂಪಿಸಿದರು. ಎಂ.ಎಸ್.ಜಯಣ್ಣ ವಂದಿಸಿದರು. ದಾರಿಬುತ್ತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.