ಬರಹಗಳು ಎಲ್ಲರ ಜೀವನದ ಅನುಭವಕ್ಕೆ ತಾಕುವಂತಿರಬೇಕು

ಕೂಡ್ಲಿಗಿ: ಪುಸ್ತಕಗಳನ್ನು ರಚಿಸುವುದು ಆತ್ಮ ಸಂತೋಕ್ಕಾಗಿರದೇ ಸಮಾಜದ ವಿವಿಧ ಸ್ತರಗಳ ಜನತೆಗೆ ಎಲ್ಲ ಕಾಲಕ್ಕೂ ಸಕಾಲಿಕವಾಗಿರಬೇಕು. ಬರಹಗಳು ಎಲ್ಲರ ಜೀವನದ ಅನುಭವಕ್ಕೆ ತಾಕುವಂತಿರಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿಕ್ಷಕ ಟಿ.ಎಚ್.ಎಂ. ಶೇಖರಯ್ಯ ರಚಿತ ಮಾತನಾಡದ ಚುಕ್ಕಿ ಮಕ್ಕಳ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡುತ್ತಿದ್ದರು.

ಪುಸ್ತಕಗಳು, ಬರಹಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಪುಸ್ತಕಗಳು ಓದಿಸಿಕೊಂಡು ಹೋಗುವಂತಾಗಬೇಕು. ಸಾಮಾಜಿಕ ಬದ್ಧತೆ ಇರುವ ಬರಹಗಳು ಸದಾ ಕಾಲ ಪ್ರಸ್ತುತವೆನಿಸುತ್ತವೆ. ಕುವೆಂಪು ಅವರ ಓ ನನ್ನ ಚೇತನ ಕವಿತೆ, ದ.ರಾ. ಬೇಂದ್ರೆಯವರ ಕವಿತೆಗಳು ಸೇರಿದಂತೆ ಕನ್ನಡ ನಾಡಿನ ಮಹಾನ್ ಕವಿಗಳು ಅವರ ಬರಹಗಳು ಇಂದಿಗೂ ಸಕಾಲಿಕವಾಗಿರುವುದ್ದರಿಂದ ಆ ಮಹಾನ್ ಕವಿಗಳು ಕನ್ನಡನಾಡಿನಲ್ಲಿ ಅಜರಾರಮರವಾಗಿದ್ದಾರೆ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕೃತರಾದ ಡಾ.ಕೆ.ಶಿವಲಿಂಗಪ್ಪ ಹಂದಿಹಾಳ ಅವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಮಕ್ಕಳ ಸಾಹಿತ್ಯ ಬರೀ ಮಕ್ಕಳಿಗೆ ಮಾತ್ರವಲ್ಲ, ಮಕ್ಕಳ ಮನಸ್ಸುಳ್ಳ ಎಲ್ಲರಿಗೂ ಹಿತ ಮುದ ನೀಡುತ್ತವೆ. ಶಿಕ್ಷಕರಿಗೆ ಮಗುವಿನ ಮುಗ್ಧ ಮನಸ್ಸು ಇದ್ದಾಗ ಮಕ್ಕಳ ಮನಸ್ಸನ್ನು ಅರಿಯಲು ಸಾಧ್ಯ. ನಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವುದರಿಂದ ಭವಿಷ್ಯದಲ್ಲಿ ನಮ್ಮ ಬದುಕು ಹಸನಾಗುತ್ತದೆ. ಬಾಲ್ಯವನ್ನು ಮೆಲುಕು ಹಾಕಿದಾಗ ಮಾತ್ರ ವರ್ತಮಾನ ಅರಿಯಲು ಸಾಧ್ಯವಾಗುತ್ತದೆ. ಮಕ್ಕಳಿಂದಲೂ ಸಾಹಿತ್ಯ ರಚಿಸುವ ವಾತಾವರಣ ಮೂಡಿದಾಗ ಮಕ್ಕಳು ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ, ನಾಟಕ ರಚನೆಕಾರ ಎನ್.ಎಂ.ರವಿಕುಮಾರ್ ಮಾತನಾಡಿ ಕೂಡ್ಲಿಗಿ ತಾಲೂಕಿನಲ್ಲಿ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಗುಡೇಕೋಟೆ ಭಾಗದಲ್ಲಿ ತಳಸಮುದಾಯಗಳ ಹಿನ್ನೆಲೆಯಿಂದ ಬಂದ ಹತ್ತಾರು ಯುವಕರು ಪಿಎಚ್ಡಿ ಪಡೆದುಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಶಿಕ್ಷಕರಾದ ಟಿ.ಎಚ್.ಎಂ.ಶೇಖರಯ್ಯ ಮಕ್ಕಳಿಗೆ ಹಿತವನ್ನುುಂಟು ಮಾಡುವ ರೀತಿಯಲ್ಲಿ ಈ ನೆಲದ ಭಾಷೆಯನ್ನು ತನ್ನ ಕೃತಿಯಲ್ಲಿ ಬಳಸುವ ಮೂಲಕ ಇಲ್ಲಿಯ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ಶಿಕ್ಷಕರು ಕ್ರಿಯಾಶೀಲವಾದರೆ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರೆಯಲು ಸಾಧ್ಯ ಎಂದರು.

ಡಾ.ಸಿದ್ದೇಶ್ ಕಾತ್ರಿಕೇಯನಹಟ್ಟಿ ಕೃತಿ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಲೇಖಕ ಭೀಮಣ್ಣ ಗಜಾಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾನಂದ, ಪ್ರಗತಿಪರ ಚಿಂತಕರಾದ ಹರಹನಹಳ್ಳಿಯ ಬಸವರಾಜ ಸಂಗಪ್ಪನವರ್, ಸಿದ್ದಯ್ಯ, ಮುಂತಾವದರು ಉಪಸ್ಥಿತರಿದ್ದರು. ನಾಗೇಶ್ ತಂಡದಿಂದ ಗೀತಗಾಯನ ನೆರೆದಿದ್ದ ಸಾಹಿತ್ಯಾಸಕ್ತರ ಮನಸೆಳೆಯಿತು. ಜಿ.ಜಗದೀಶ್ ಸ್ವಾಗತಿಸಿದರು. ಅಜ್ಜಯ್ಯಮೂರ್ತಿ ನಿರೂಪಿಸಿದರು. ಎಚ್.ಎಂ.ಗುರುಬಸವರಾಜ್ ವಂದಿಸಿದರು.