ಸಾರಾಂಶ
- ಮೈಸೂರಿನ 36 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಸುಗಮಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಪೊಲೀಸ್ ಇಲಾಖೆಯ ಸಿಎಆರ್ ಮತ್ತು ಡಿಎಆರ್ ಘಟಕದಲ್ಲಿ ಖಾಲಿಯಿರುವ ಕಾನ್ಸ್ ಟೇಬಲ್ಸ್ (ಪೇದೆ) ಹುದ್ದೆಗಳ ಭರ್ತಿಗಾಗಿ ಭಾನುವಾರ ಮೈಸೂರಿನ 36 ಪರೀಕ್ಷಾ ಕೇಂದ್ರದಲ್ಲಿ ನಡೆದ ಲಿಖಿತ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿದ್ದರು.ಸಿಎಆರ್ ಪೇದೆಗಳ ನೇಮಕಾತಿಗಾಗಿ 29 ಕೇಂದ್ರ ಹಾಗೂ ಡಿಎಆರ್ ಪೇದೆ ಹುದ್ದೆಗಳಿಗಾಗಿ 7 ಕೇಂದ್ರದಲ್ಲಿ ಲಿಖಿತ ಪರೀಕ್ಷೆ ಆಯೋಜಿಸಲಾಗಿತ್ತು. ಎಲ್ಲೆಡೆ ಪರೀಕ್ಷೆಯು ಸುಗಮವಾಗಿ ಜರುಗಿತು.
ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 19400 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಹಿಂದೆ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಹಿನ್ನೆಲೆಯಲ್ಲಿ ಸಿಎಆರ್, ಡಿಎಆರ್ ಪೇದೆ ನೇಮಕಾತಿ ಲಿಖಿತ ಪರೀಕ್ಷೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.ಪ್ರತಿಯೊಬ್ಬ ಅಭ್ಯರ್ಥಿಗಳನ್ನು 3- 4 ಬಾರಿ ತಪಾಸಣೆಗೊಳಪಡಿಸಲಾಯಿತು. ನಿಯಮಾನುಸಾರ ತುಂಬುತೋಳಿನ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದವರಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಇದರಿಂದ ಕೆಲವು ಅಭ್ಯರ್ಥಿಗಳು ಸ್ಥಳದಲ್ಲೀ ಟಿ- ಶರ್ಟ್ ಧರಿಸಿ, ಪ್ಯಾಂಟ್ ಬದಲಿಸಿ ಪರೀಕ್ಷಾ ಕೇಂದ್ರ ಪ್ರವೇಶಿಸಿದರು. ಮತ್ತೆ ಕೆಲವೆಡೆ ಪರೀಕ್ಷಾ ಕೇಂದ್ರದ ಬಳಿಯೇ ತುಂಬು ತೋಳಿನ ಶರ್ಟ್ ಅನ್ನು ಕತ್ತರಿಸಿ ಅರ್ಧ ತೋಳಿನ ಶರ್ಟ್ ಆಗಿ ಪರಿವರ್ತಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.
ಅಭ್ಯರ್ಥಿಗಳು ಸೊಂಟಕ್ಕೆ ಹಾಕಿದ್ದ ಬೆಲ್ಟ್ ತೆಗೆಸಿ, ಕೈ ಹಾಗೂ ಕೊರಳಿದ್ದ ದಾರ, ಸರ, ತಾಯತವನ್ನು ಬಿಚ್ಚಿಸಲಾಯಿತು. ಇನ್ ಶರ್ಟ್ ಮಾಡಿದ್ದನ್ನು ತೆಗೆಸಲಾಯಿತು. ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಚೀಟಿ ತಂದಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲರನ್ನು ಕೂಲಂಕುಶವಾಗಿ ತಪಾಸಣೆ ಮಾಡಲಾಯಿತು. ಬಳಿಕ ಕೇಂದ್ರ ಪ್ರವೇಶಿಸಿದ ಪ್ರತಿಯೊಬ್ಬರ ಫೋಟೋ ತೆಗೆದು, ಆಧಾರ್ ಕಾರ್ಡ್ ನಂಬರ್ ನಮೂದಿಸಿ ದಾಖಲೀಕರಿಸಲಾಯಿತು.ಬೆಳಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಪರೀಕ್ಷೆ ಜರುಗಿತು. ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಾ ನಿಷೇದಾಜ್ಞೆ ಸಹ ಜಾರಿಗೊಳಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ, ಎಲ್ಲಾ ಎಸಿಪಿ, ಇನ್ಸ್ ಪೆಕ್ಟರ್, ಎಸ್ಐ ಮತ್ತು ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.ಇತರೆ ಇಲಾಖೆಗಳಿಗೆ ಇಲ್ಲದ ಉಸಾಬರಿ ಪೊಲೀಸರಿಗೆ ಯಾಕೆ?
ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಲೋಕ ಸೇವಾ ಆಯೋಗ ಇಲ್ಲವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತದೆ. ಆದರೆ ಪೊಲೀಸ್ ಇಲಾಖೆಯ ನೇಮಕಾತಿ ಪರೀಕ್ಷೆಯನ್ನು ಇಲಾಖೆಯ ಉಸ್ತುವಾರಿವಾರಿಯಲ್ಲಿಯೇ ನಡೆಸಲಾಗುತ್ತದೆ. ಇತರೆ ಇಲಾಖೆಗಳಿಗೆ ಇಲ್ಲದ ಉಸಾಬರಿ ಪೊಲೀಸ್ ಇಲಾಖೆಗೆ ಮಾತ್ರ ಯಾಕೆ? ಎಂಬುದು ಕೆಲವರ ಪ್ರಶ್ನೆ.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯವೇ ಹೊರತು ಪರೀಕ್ಷೆ ನಡೆಸುವುದಲ್ಲ. ಪ್ರತಿ ಕೇಂದ್ರಕ್ಕೆ ಎಸಿಪಿ, ಇನ್ನ್‌ಸ್ಪೆಕ್ಟರ್, ಎಸ್ಐ, ಎಎಸ್ಐ, ಮುಖ್ಯ ಪೇದೆ, ಪೇದೆ- ಹೀಗೆ ತಲಾ 20 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಿಬ್ಬಂದಿ ಪರೀಕ್ಷೆ ಬರೆಯಲು ಬರುವವರ ತಪಾಸಣೆ, ಕಂಪ್ಯೂಟರ್ರ್‌ನಲ್ಲಿ ಡಾಟಾ ಎಂಟ್ರಿ ಮಾಡುವುದರ ಜೊತೆಗೆ ಅವರ ಲಗೇಜ್ ಕಾಯುವ ಕೆಲಸಕ್ಕೂ ನಿಯೋಜಿಸಲಾಗಿತ್ತು. ಇದರಿಂದಾಗಿ ಬಹುತೇಕ ಠಾಣೆಗಳಲ್ಲಿ ಇವತ್ತು ಪೊಲೀಸ್ ಸಿಬ್ಬಂದಿಯ ಕೊರತೆ ಇತ್ತು.
ಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಹಗರಣದ ಹಿನ್ನೆಲೆಯಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇಲಾಖಾ ಪರೀಕ್ಷೆ ನಡೆಸಲಾಗುತ್ತದೆ ಎಂದು ಬಿಂಬಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ಆದರೂ ಕೂಡ ಪ್ರಶ್ನೆಪತ್ರಿಕೆ, ಪ್ರಭಾವ ಮತ್ತಿತರ ವಿಷಯದಲ್ಲಿಅಪಸ್ವರಗಳು ನಿಂತಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ, ಪರೀಕ್ಷೆಯನ್ನು ಕೆಪಿಎಸ್ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸುವುದೇ ಕಾದು ನೋಡಬೇಕು.