ವೈ. ಮಹಾಬಲೇಶ್ವರಪ್ಪ ಕೊಡುಗೆ ಅವಿಸ್ಮರಣೀಯ

| Published : Nov 13 2023, 01:16 AM IST

ಸಾರಾಂಶ

ಪಾರ್ವತಿ ನಗರದ ಗೌರಿಹಳ್ಳಿಮನೆಯಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಕನ್ನಡಪ್ರಭ ಹೊರತಂದ "ಮರೆಯದ ಮಹಾನುಭಾವ ವೈ. ಮಹಾಬಲೇಶ್ವರಪ್ಪ " ವಿಶೇಷ ಪುರವಣಿ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆಸ್ಥೆ ವಹಿಸಿ ಕೆಲಸ ಮಾಡಿದ ವೈ. ಮಹಾಬಲೇಶ್ವರಪ್ಪ ಅವರ ಕೊಡುಗೆಯನ್ನು ಈ ಜಿಲ್ಲೆಯ ಜನರು ಎಂದೆಂದೂ ಮರೆಯುವಂತಿಲ್ಲ ಎಂದು ಹಿರಿಯಚಿಂತಕ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಹೇಳಿದರು.

ಇಲ್ಲಿನ ಪಾರ್ವತಿ ನಗರದ ಗೌರಿಹಳ್ಳಿಮನೆಯಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಕನ್ನಡಪ್ರಭ ಹೊರತಂದ "ಮರೆಯದ ಮಹಾನುಭಾವ ವೈ. ಮಹಾಬಲೇಶ್ವರಪ್ಪ " ವಿಶೇಷ ಪುರವಣಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಹಾಬಲೇಶ್ವರಪ್ಪ ಅವರು ಓದಿದ್ದು ನಗರದ ವಾರ್ಡ್ಲಾ ಶಾಲೆಯ ತೆಲುಗು ಮಾಧ್ಯಮದಲ್ಲಿ. ಆಗ ಬಳ್ಳಾರಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇರಲಿಲ್ಲ. ವೈ. ನಾಗೇಶಶಾಸ್ತ್ರಿಗಳು ಕನ್ನಡ ಪಂಡಿತರಾಗಿ ನೇಮಕರಾದ ಬಳಿಕ 8ನೇ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತು ಕನ್ನಡದ ಪಾಠ ಕೇಳುತ್ತಿದ್ದರು. ಅಷ್ಟರಮಟ್ಟಿಗೆ ಮಹಾಬಲೇಶ್ವರಪ್ಪ ಅವರಿಗೆ ಕನ್ನಡದ ಬಗ್ಗೆ ಪ್ರೀತಿ ಹಾಗೂ ಭಾಷಾಭಿಮಾನವಿತ್ತು.

ಮುಂದೆ ತಾವು ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ಬಳಿಕ ಆಲೂರು, ಆದೋನಿ, ಎಮ್ಮಿಗನೂರು ಸೇರಿದಂತೆ ಅವಿಭಾಜ್ಯ ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆದು ಕನ್ನಡ ಪಂಡಿತರನ್ನು ನೇಮಕ ಮಾಡಿದರು. ತಾವು ತೆಲುಗು ಮಾಧ್ಯಮದಲ್ಲಿ ಓದಿದ್ದರೂ ಮುಂದಿನ ತಲೆಮಾರಿಗೆ ಕನ್ನಡ ಭಾಷೆ ಹಾಗೂ ಕನ್ನಡದ ಸಂಸ್ಕಾರ ದಕ್ಕಬೇಕು ಎಂಬ ಆಶಯದಿಂದಾಗಿ ಕನ್ನಡ ಶಾಲೆಗಳನ್ನು ತೆರೆದು ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು. ಕನ್ನಡ ಬೆಳೆಸಲು ಸಶಕ್ತವಾಗಿ ಮಹಾಬಲೇಶ್ವರಪ್ಪ ಅವರು ಮಾಡಿದ ಕೆಲಸದಿಂದಾಗಿಯೇ ಗಡಿ ಭಾಗದಲ್ಲಿ ಇಂದಿಗೂ ಕನ್ನಡ ನಳನಳಿಸುವಂತಾಗಿದೆ. ಇಂಗ್ಲಿಷ್ ಪ್ರಾಬಲ್ಯ ನಡುವೆ ಕರ್ನೂಲ್ ಜಿಲ್ಲೆಯ ಗಡಿ ಭಾಗದಲ್ಲಿ 10ರಿಂದ 12 ಸಾವಿರ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವುದನ್ನು ಕಾಣಬಹುದು. ಒಳನಾಡಿನಲ್ಲಿ ಕನ್ನಡ ಮಾಧ್ಯಮ ಬಾಡಿದರೂ ಗಡಿಭಾಗದಲ್ಲಿ ಅರಳಿನಿಂತಿದೆ ಎಂದರು.

ರಾಜಕೀಯವಾಗಿ ಮಹಾಬಲೇಶ್ವರಪ್ಪ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಕಾಂಗ್ರೆಸೇತರ ಧೋರಣೆ ಹೊಂದಿದ್ದ ಅವರು ಜಸ್ಟೀಸ್ ಪಕ್ಷದ ಸದಸ್ಯರಾಗಿದ್ದರು. ಮದ್ರಾಸ್ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಾಗಿ, ಮೂರು ಬಾರಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಕೈಗೊಂಡು ಮುತ್ಸದ್ಧಿ ರಾಜಕೀಯ ನಾಯಕರ ಚಿಂತನೆ ಹೇಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದರು ಎಂದರು.

ಮಹಾಬಲೇಶ್ವರಪ್ಪ ಕುಟುಂಬ ದಾನ, ಧರ್ಮಗಳಲ್ಲಿ ಮುಂಚೂಣಿಯಲ್ಲಿದೆ. ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಮಹಾಬಲೇಶ್ವರಪ್ಪ ಅವರ ಪುತ್ರ ಬಸವರಾಜಪ್ಪ ಅವರು ಬದುಕಿನುದ್ದಕ್ಕೂ ಅನೇಕ ಜನೋಪಯೋಗಿ ಕಾರ್ಯಗಳಿಗೆ ದೊಡ್ಡ ಮೊತ್ತದ ನೆರವು ನೀಡುವ ಮೂಲಕ ಸಮಾಜಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಲೋಹಿಯಾ ಚನ್ನಬಸವಣ್ಣ ಸ್ಮರಿಸಿಕೊಂಡರಲ್ಲದೆ, ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ, ಸರ್ವದರ್ಶನ ತೀರ್ಥ ನಾಗೇಶಶಾಸ್ತ್ರಿಗಳು ಹಾಗೂ ಗಮಕಕಲಾನಿಧಿ ಜೋಳದರಾಶಿ ದೊಡ್ಡನಗೌಡರು ಈ ಜಿಲ್ಲೆಯ ಪ್ರಾತಃಸ್ಮರಣೀಯರು. ಅವರನ್ನು ಎಂದೆಂದೂ ಮರೆಯಬಾರದು ಎಂದರು.

ಲೇಖಕರಾದ ಸಿದ್ಧರಾಮ ಕಲ್ಮಠ, ಶಿವಲಿಂಗಪ್ಪ ಹಂದ್ಯಾಳು, ದಸ್ತಗಿರಿಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್, ಶಿವಲಿಂಗಪ್ಪ ಹಂದಿಹಾಳು, ರಂಗತೋರಣದ ಪ್ರಭುದೇವ ಕಪ್ಪಗಲ್ ಹಾಗೂ ಚಾಂದ್‌ಬಾಷಾ ಅವರು ಮಾತನಾಡಿ, ನೇಪಥ್ಯದಲ್ಲಿರುವ ಅನೇಕ ಮಹನೀಯರ ಬಗ್ಗೆ ಜನಸಮುದಾಯಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿರುವ ಕನ್ನಡಪ್ರಭ ದಿನಪತ್ರಿಕೆ ಸದಾ ಹೊಸತನದ ಹಾಗೂ ಹೊಸ ಬಗೆಯ ಆಲೋಚನೆಗಳ ತುಡಿತ ಹೊಂದಿದೆ. ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಲೆ, ಸಾಹಿತ್ಯ, ಪ್ರವಾಸೋದ್ಯಮ, ಪ್ರಾಚೀನತೆ ಸೇರಿದಂತೆ ವಿವಿಧ ಆಯಾಮಗಳ ಹೊತ್ತ ವಿಶೇಷ ಸಂಚಿಕೆಯನ್ನು ರೂಪಿಸಿತ್ತು. ಹೀಗೆ ಜಿಲ್ಲೆಯ ಅನೇಕ ಮಹನೀಯರ ಬಗ್ಗೆ ಪುರವಣಿಗಳನ್ನು ಹೊರತಂದು ಜನಸಮುದಾಯಕ್ಕೆ ಪರಿಚಯಿಸುವ ಕಾಳಜಿಯ ಕೆಲಸ ಮಾಡಲಿ ಎಂದು ಆಶಿಸಿದರು.

ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ಕೆ.ಎಂ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಪ್ರಾರ್ಥನೆಗೀತೆ ಹಾಡಿದರು. ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು, ಹೋಟೆಲ್ ಉದ್ಯಮಿಗಳಾದ ದೊಡ್ಡಬಸಪ್ಪ ಶ್ರೀಧರಗಡ್ಡೆ, ಚಂದ್ರು, ಪ್ಯಾಟ್ಯಾಳ್ ಬಸವರಾಜ್, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಆಪ್ತ ಸಹಾಯಕ ಸಿದ್ದು, ಕನ್ನಡಪ್ರಭ ಪ್ರಸರಣ ವಿಭಾಗದ ಪ್ರಶಾಂತ್ ಹಾಗೂ ಪುರುಷೋತ್ತಮ ಹಂದ್ಯಾಳು ಇದ್ದರು.