ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಸರ್ವ ಶಿಕ್ಷಣ ಅಭಿಯಾನ ಯೋಜನೆ (ಎಸ್‌ಎಸ್‌ಎ) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 150 ಜನ ಶಾಲಾ ಶಿಕ್ಷಕರು ಕಳೆದ ಎರಡು, ಮೂರು ತಿಂಗಳಿಂದ ಸೂಕ್ತ ಸಂಬಳವಿಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೊಂದ ಶಿಕ್ಷಕರು ನೋವು ವ್ಯಕ್ತಪಡಿಸಿದ್ದಾರೆ.ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರನ್ನು ಭೇಟಿಯಾಗಿದ್ದ ಪ್ರಾಥಮಿಕ ಶಿಕ್ಷಕರ ಸಂಘದ ನಿಯೋಗವು, ಈ ಯೋಜನೆಗಳಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕೆಲವು ತಿಂಗಳುಗಳಿಂದ ಸಂಬಳವಿಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ದಯವಿಟ್ಟು ವೇತನ ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಶಹಾಪುರ ತಾಲೂಕಿನಲ್ಲಿ ಸಿಆರ್‌ಪಿ, ಬಿಆರ್‌ಪಿ, ಬಿಆರ್‌ಸಿ ಹಾಗೂ 150 ಜನ ಎಸ್‌ಎಸ್‌ಎ ಶಿಕ್ಷಕರಿಗೆ ಮೂರು ತಿಂಗಳಿಂದ ಸಂಬಳವಿಲ್ಲ. ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಬ್ಯಾಂಕ್ ಸಾಲ, ಓಡಾಟದ ಖರ್ಚು ಸೇರಿದಂತೆ ದಿನ ನಿತ್ಯದ ಖರ್ಚುಗಳಿಗೆ ಹಣವಿಲ್ಲದೆ ಪರಿತಪಿಸುವಂತಾಗಿದೆ ಎಂದು ಶಿಕ್ಷಕರು ತಮ್ಮ ಅಳಲು ತೋಡಿಕೊಂಡರು.ಕುಟುಂಬ ನಿರ್ವಹಣೆ ಕಷ್ಟಕರ:
ಕಳೆದ ಮೂರು ತಿಂಗಳಿಂದ ಸಂಬಳ ಇಲ್ಲದಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಮನೆ ಬಾಡಿಗೆ ನೀಡಲಾಗದೆ, ಕುಟುಂಬದ ದೈನಂದಿನ ಖರ್ಚಿಗೆ ಹಣ ಇಲ್ಲದಂತಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಿಕ್ಷಕರು ಸಚಿವರೆದುರು ತಿಳಿಸಿದರು.ಶಿಕ್ಷಕರ ಮನವಿ ಹಾಗೂ ಅವರ ಕಷ್ಟಗಳನ್ನು ಆಲಿಸಿದ ಸಚಿವ ದರ್ಶನಾಪುರ, ಶಿಕ್ಷಣ ಸಚಿವರ ಜೊತೆ ಮಾತನಾಡಿ ಆದಷ್ಟು ಬೇಗ ವೇತನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆಂದು ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಬೇಜವಾಬ್ಧಾರಿ:ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಕರಿಗೆ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದ್ದು, ಇವರ ವಿರುದ್ಧ ರಾಜ್ಯ ಯೋಜನಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಶಿಕ್ಷಕರು ಕನ್ನಡಪ್ರಭಕ್ಕೆ ತಿಳಿಸಿದರು.
ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ. ಕಿರಾಣಿ ಅಂಗಡಿಯವರು ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ದಿನನಿತ್ಯದ ಖರ್ಚಿಗೆ ಹಣಕ್ಕಾಗಿ ಬೆಳ್ಳಿ ಲಿಂಗದ ಕಾಯಿ ಮಾರಿದ್ದೇನೆ. ಇಂಥ ಕಷ್ಟದ ಕಾಲದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಾಕಿ ನಿಂತ ವೇತನ ಬಿಡುಗಡೆ ಮಾಡಿದರೆ ತುಂಬಾ ಉಪಕಾರವಾಗುತ್ತದೆ.ಹೆಸರೇಳಲು ಇಚ್ಛಿಸದ ಶಿಕ್ಷಕಿ.
ಕಳೆದ ಮೂರು ತಿಂಗಳಿಂದ ಸುಮಾರು 150 ಜನ ಶಿಕ್ಷಕರಿಗೆ ಸಂಬಳವಿಲ್ಲದೆ ತೀವ್ರ ತೊಂದರೆಯಾಗಿದೆ. ಕೂಡಲೇ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡಬೇಕು. ಇಲ್ಲದೆ ಹೋದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.ಬಸವರಾಜ ಯಾಳಗಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹಾಪುರ.
ಎಸ್‌ಎಸ್‌ಎ ಯೋಜನೆ ಅಡಿಯಲ್ಲಿ 150 ಜನ ಶಿಕ್ಷಕರಿಗೆ 3 ತಿಂಗಳಿಂದ ಸಂಬಳವಿಲ್ಲದಿರುವುದು. ನನ್ನ ಗಮನಕ್ಕೆ ಬಂದಿದೆ. ಶಿಕ್ಷಕರ ಸಂಘದವರು ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಶಿಕ್ಷಣ ಸಚಿವರನ್ನು ಸಂಪರ್ಕಿಸಿ ಆದಷ್ಟು ಬೇಗ ವೇತನ ನೀಡುವ ವ್ಯವಸ್ಥೆ ಮಾಡುತ್ತೇನೆ.ಶರಣಬಸಪ್ಪಗೌಡ ದರ್ಶನಾಪೂರ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು.