ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಸಾಂಸ್ಕೃತಿಕ, ಹಿರಿಮೆ ಗರಿಮೆ ಹೊಂದಿರುವ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವುದು. ಫೆಬ್ರವರಿ ಕೊನೆಯ ವಾರದಲ್ಲಿ ನಡೆಯುವ 4ನೇ ಶಹಾಪುರ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಶಿಕ್ಷಣ ಇಲಾಖೆ ಸಹಾಯ, ಸಹಕಾರ ತುಂಬಾ ಅಗತ್ಯವಾಗಿದೆ. ಇತಿಹಾಸ ನಿರ್ಮಿಸುವಂತಹ ಸಮ್ಮೇಳನ ಮಾಡೋಣ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಮನವಿ ಮಾಡಿದರು.ಭೀಮರಾಯನ ಗುಡಿಯ ಪದವಿ ಪೂರ್ವ ಕಾಲೇಜಿನಲ್ಲಿ ಶಹಾಪುರ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭೀಮರಾಯನ ಗುಡಿ ಹಾಗೂ ನಾಗನಟಿಗಿ ಕ್ಲಸ್ಟರ್ ವಲಯದ ಅಧಿಕಾರಿಗಳ ಹಾಗೂ ವಿವಿಧ ಶಾಲೆಗಳ ಮುಖ್ಯಗುರುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭೀಮರಾಯನಗುಡಿಯಲ್ಲಿ ಫೆ.26ರಂದು ಆಯೋಜಿಸಲು ತೀರ್ಮಾನಿಸಲಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭೀಮರಾಯನ ಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಕನ್ನಡ ನಾಡಿನ ಪ್ರಮುಖ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆ ಪ್ರೋತ್ಸಾಹ, ಸಹಕಾರ ಅಗತ್ಯವಿದೆ ಎಂದರು.ಕನ್ನಡ ಸಾಹಿತ್ಯ ಸಮ್ಮೇಳನ ಭೀಮರಾಯನಗುಡಿಯಲ್ಲಿ ಹಮ್ಮಿಕೊಂಡಿರುವುದರಿಂದ ಭೀಮರಾಯನಗುಡಿ ಮತ್ತು ಸಗರ ಕ್ಲಸ್ಟರ್ ವಲಯದ ವ್ಯಾಪ್ತಿಗೆ ಬರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮುಖ್ಯ ಗುರುಗಳು, ಪ್ರಾಂಶುಪಾಲರು ಮತ್ತು ಅಧ್ಯಾಪಕರ ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಸಮ್ಮೇಳನದ ಯಶಸ್ವಿಗೆ ಶ್ರಮಿಸುವಂತೆ ತಿಳಿಸಿದರು.
ಕ್ಲಸ್ಟರ್ ವಲಯ ಅಧಿಕಾರಿ ಮಶಾಕ್ ಇನಾಮದಾರ್ ಮಾತನಾಡಿ, ಸಮ್ಮೇಳನದ ಮೆರವಣಿಗೆ ಮತ್ತು ವಿವಿಧ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮೇಳನಕ್ಕೆ ಮೆರಗು ತರಬೇಕು ಎಂದರು.ಭೀಮರಾಯನಗುಡಿಯ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಂದ್ರಪ್ಪ ಮಡಿವಾಳಕರ್, ಉಪಪ್ರಾಂಶುಪಾಲ ಮಲ್ಲಿಕಾರ್ಜುನ ಬೇಲೆರಿ, ನಾಗನಟಿಗಿ ಕ್ಲಸ್ಟರ್ ಅಧಿಕಾರಿ ಧರ್ಮರಾಜ, ಮಲ್ಲಾರಡ್ಡಿ ಪಾಟೀಲ್ ಹೋತಪೇಟ್, ಸಾಯಬಣ್ಣ ಪುರ್ಲೆ, ತಿಪ್ಪಣ್ಣ ಕ್ಯಾತನಾಳ, ರಾಘವೇಂದ್ರ ಹಾರಣಗೇರಾ, ಸೋನಾಬಾಯಿ ಇತರರಿದ್ದರು.