ಸಾರಾಂಶ
ಅಂಗನವಾಡಿ ಸಹಾಯಕಿಯೊಬ್ಬಳು ಮಕ್ಕಳನ್ನು ಅಂಗನವಾಡಿ ಕೇಂದ್ರದೊಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದ್ದು, ಆಕೆಯ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ : ಅಂಗನವಾಡಿ ಸಹಾಯಕಿಯೊಬ್ಬಳು ಮಕ್ಕಳನ್ನು ಅಂಗನವಾಡಿ ಕೇಂದ್ರದೊಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ನಡೆದಿದ್ದು, ಆಕೆಯ ಈ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೂದೂರು ಗ್ರಾಮದ ಅಂಗನವಾಡಿ ಕೇಂದ್ರ-1ರ ಸಹಾಯಕಿ ಸಾವಿತ್ರಮ್ಮ ಎಂಬಾಕೆಯೇ ಕೇಂದ್ರಕ್ಕೆ ಬೀಗ ಹಾಕಿದವಳು. ಮುಖ್ಯ ಸಹಾಯಕಿ ಮಾಸಿಕ ಸಭೆಗೆ ಬೇರೆ ಗ್ರಾಮಕ್ಕೆ ಹೋಗಿದ್ದರಿಂದ, ಸಹಾಯಕಿ ಸಾವಿತ್ರಮ್ಮ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದರು. ಆದರೆ, ಕೆಲ ಸಮಯದ ನಂತರ ಕೊಠಡಿ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋಗಿದ್ದಾರೆ. ಇತ್ತ ಮಕ್ಕಳು ಅತ್ತು ಕೂಗಾಡಿದ್ದನ್ನು ಆಲಿಸಿದ ಗ್ರಾಮಸ್ಥರು ಕೂಡಲೇ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮುಖ್ಯ ಸಹಾಯಕಿ ಕೊಠಡಿ ಬೀಗ ತೆರೆದು, ಆತಂಕಗೊಂಡಿದ್ದ ಮಕ್ಕಳನ್ನು ಹೊರಬಿಟ್ಟಿದ್ದಾರೆ.
ತಪ್ಪಿಸ್ಥ ಸಹಾಯಕಿ ಸಾವಿತ್ರಮ್ಮ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಕ್ರಮಕ್ಕೆ ಕೋರಿ ಶಿಶು ಅಭಿವೃದ್ಧಿ ಇಲಾಖೆಯ ಗುರುಮಠಕಲ್ ಅಧಿಕಾರಿಗಳು ಪತ್ರ ಬರೆದಿದ್ದಾರೆ.---
ಚಿತ್ರ: ಬೂದೂರು ಅಂಗನವಾಡಿ ಕೇಂದ್ರ-1ಕ್ಕೆ ಸಹಾಯಕಿ ಬೀಗ ಜಡಿದಿದ್ದರಿಂದ ಮಕ್ಕಳ ಆತಂಕದಲ್ಲಿರುವುದು.