ಕನ್ನಡಕ್ಕೆ  ಸ್ವಾಯತ್ತತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಸಂಸದೀಯ ಸಮಿತಿ ಅಧ್ಯಕ್ಷ ಶ್ರೀರಂಗ್‌ ಅಪ್ಪ ಚಂದು ಬರ್ನೆ ಅವರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಸಲ್ಲಿಸಿದರು.

ಮೈಸೂರು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು 17 ವರ್ಷವಾದರೂ ಅದಕ್ಕೆ ಸ್ವಾಯತತ್ತೆ ಲಭಿಸಿಲ್ಲ. ಕೂಡಲೇ ಶಿಕ್ಷಣ ಸಚಿವಾಲಯದ ಜೊತೆ ಚರ್ಚಿಸಿ ಸ್ವಾಯತ್ತತೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಸಂಸದೀಯ ಸಮಿತಿ ಅಧ್ಯಕ್ಷ ಶ್ರೀರಂಗ್‌ ಅಪ್ಪ ಚಂದು ಬರ್ನೆ ಅವರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಸಲ್ಲಿಸಿದರು.

ಇತ್ತೀಚೆಗೆ ನಗರದ ಅರಮನೆ ಮಂಡಳಿ ಕಚೇರಿಗೆ ಭೇಟಿ ನೀಡಿದ್ದ ತಂಡಕ್ಕ್ಕೆ ಮನವಿ ಸಲ್ಲಿಸಿದ ಅವರು, ಈಗಾಗಲೇ 17 ವರ್ಷವಾದರೂ ಶಾಸ್ತ್ರೀಯ ಕನ್ನಡ ಭಾಷಾ ಕೇಂದ್ರಕ್ಕೆ ಸ್ವಾಯತ್ತತೆ ನೀಡಿಲ್ಲ. ಇಲ್ಲಿನ ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರಕ್ಕೆ ಅಗತ್ಯ ಅನುದಾನ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಸಂಶೋಧನೆ, ಪ್ರಕಟಣೆ ಮತ್ತಿತರ ಕಾರ್ಯಗಳಿಗೆ ನೆರವಾಗಲು ಸ್ವಾಯತ್ತತೆ ಅಗತ್ಯ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಕೇಂದ್ರವು ಯೋಜನಾ ನಿರ್ದೇಶಕರು, 11 ಮಂದಿ ಶೈಕ್ಷಣಿಕ ಸಿಬ್ಬಂದಿ ಮತ್ತು 8 ಮಂದಿ ಆಡಳಿತಾತ್ಮಕ ಸಿಬ್ಬಂದಿಯನ್ನು ಒಗೊಂಡಿದೆ. ಪ್ರತಿ ವರ್ಷವು ಕೇಂದ್ರ ಸಾಕಷ್ಟು ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತದೆ. ಇದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಸ್ವಾಯತ್ತತೆ ಅಗತ್ಯ ಎಂದರು.

ತಮಿಳಿಗೆ 2004ರಲ್ಲಿ ಶಾಸ್ತ್ರೀಯ ಸ್ಥಾನಮಾನ ನೀಡಿ, 2008ರಲ್ಲಿಯೇ ಸ್ವಾಯತ್ತತೆ ನೀಡಲಾಯಿತು. ಆದರೆ ಕನ್ನಡಕ್ಕೆ 2008ರಲ್ಲಿ ಶಾಸ್ತ್ರೀಯ ಸ್ಥಾನಾಮಾನ ದೊರೆತರು ಈವರೆಗೂ ಸ್ವಾಯತ್ತತೆ ನೀಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಮೈಸೂರು ವಿವಿ ಸಿಂಡಿಕೇಟ್‌ ಸಭೆಯು ಕೂಡ ಬಸವ ಅಧ್ಯಯನ ಪೀಠದ ಬಳಿ 4 ಎಕರೆ 2 ಗುಂಟೆ ಜಾಗ ನೀಡಲು ತೀರ್ಮಾನಿಸಿದೆ. ರಾಜ್ಯ ಸರ್ಕಾರ ಕೂಡ 2020ರಲ್ಲಿ ಭೂಮಿಯನ್ನು ನಿಗದಿಪಡಿಸಿದೆ. ಆದ್ದರಿಂದ ಕೇಂದ್ರ ಶಿಕ್ಷಣ ಸಚಿವಾಲಯವು ಅಗತ್ಯವಿರುವ ಅನುದಾನ ನೀಡಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ನೆರವಾಗಬೇಕು ಎಂದು ಅವರು ಕೋರಿದ್ದಾರೆ.

ತಂಡದಲ್ಲಿ ಸದಸ್ಯರಾದ ಸತೀಶ್‌ಕುಮಾರ್‌ಗೌತಮ್‌, ಟಿ.ಎಂ. ಸೆಲ್ವಗಣಪತಿ, ಓಂಪ್ರಕಾಶ್‌ಭೂಪಲ್ಸಿನ್‌, ಈರಣ್ಣ ಕಡಾಡಿ, ನೀರಜ್‌ಡಂಗಿ, ಸಂಗೀತಾ ಯಾದವ್‌, ಧರ್ಮಶೀಲ್‌ ಗುಪ್ತ ಇದ್ದರು.