ಸಾರಾಂಶ
ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವನ್ನು ಹಂಚಿಕೊಂಡರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಮೇ 6ರಿಂದ ಆರಂಭವಾದ ಯಕ್ಷಗಾನ ವೇಷಭೂಷಣ ಮತ್ತು ಬಣ್ಣಗಾರಿಕೆ ಬೇಸಿಗೆ ಶಿಬಿರವು ಸೋಮವಾರ ಯಶಸ್ವಿಯಾಗಿ ಸಮಾಪನಗೊಂಡಿತು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ವಿ.ಜಿ. ಶೆಟ್ಟಿ, ಯಕ್ಷಗಾನ ಕೇಂದ್ರ ಇದು ಯಕ್ಷಗಾನದ ಮೂಲಮಠ ಎಂಬುದಾಗಿ ಹೇಳುವುದು ಸಾರ್ಥಕವಾಗಿದೆ. ಯಕ್ಷಗಾನದ ಪಾರಂಪರಿಕ ಶೈಲಿಯ ಸಂರಕ್ಷಣೆಗೆ ಕೇಂದ್ರ ಅನುಪಮವಾದ ಕೊಡುಗೆ ಸಲ್ಲಿಸಿದೆ. ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರಗಳು ಎಲ್ಲ ಕಡೆ ನಡೆಯುತ್ತದೆ. ಆದರೆ ಇದೊಂದು ವಿಶಿಷ್ಟವಾದ ಶಿಬಿರ ಎಂಬುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಕೇಂದ್ರ ಈ ವಿಶಿಷ್ಟ ಶಿಬಿರ ನಡೆಸುವುದಕ್ಕೆ ಕಾರಣವಾದ ಪ್ರೇರಣೆಯನ್ನು ತಿಳಿಸಿ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರವನ್ನಿತ್ತರು.ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ, ಮಂಜುನಾಥ ಮಯ್ಯ ಹಾಗೂ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಶಿಬಿರಾರ್ಥಿಗಳು ತಮ್ಮ ಅನುಭವನ್ನು ಹಂಚಿಕೊಂಡರು.ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರದ ಗುರುಗಳು, ಯಕ್ಷರಂಗದ ಸದಸ್ಯರು, ವಿದ್ಯಾರ್ಥಿಗಳು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ವೆಂಕಟೇಶ್, ವಿನೇಶ್ ಹಾಗೂ ನಾಗರಾಜ್ ಕಾರ್ಯಕ್ರಮ ಸಂಘಟಿಸಿದ್ದರು.