ಸಂಸ್ಕೃತಿ, ಸಂಸ್ಕಾರ ಮೈಗೂಡಿಸಲು ಯಕ್ಷಗಾನ ಪೂರಕ: ಸುಧಾಕರ ಪೈ

| Published : Mar 23 2025, 01:31 AM IST

ಸಾರಾಂಶ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಶನಿವಾರ ಎರಡು ದಿನಗಳ 33ನೇ ವರ್ಷದ ಸಾಂಪ್ರದಾಯಿಕ ‘ಯಕ್ಷೋತ್ಸವ-2025’ ಕಾರ್ಯಕ್ರಮ ನಡೆಯಿತು.

ಮಂಗಳೂರು ಎಸ್‌ಡಿಎಂನಲ್ಲಿ 2 ದಿನಗಳ ‘ಯಕ್ಷೋತ್ಸವ-2025’ ಉದ್ಘಾಟನೆ

ಕನ್ನಡಪ್ರಭ ಮಂಗಳೂರು

ಕೇರಳದ ಕಥಕ್ಕಳಿ, ಆಂಧ್ರಪ್ರದೇಶದ ಭಾಮಾ ವಿಲಾಸ ಮೊದಲಾದ ರಾಜ್ಯಗಳ ಸಮಕಾಲೀನ ಕಲೆಗಳಂತೆ ಕರಾವಳಿಯಲ್ಲಿ ಯಕ್ಷಗಾನ ವಿಜೃಂಭಿಸುತ್ತಿದೆ ಎಂದು ಹೈಕೋರ್ಟ್‌ ಹಿರಿಯ ವಕೀಲ ಎಂ.ಸುಧಾಕರ ಪೈ ಅಭಿಪ್ರಾಯಪಟ್ಟರು.

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಶನಿವಾರ ಎರಡು ದಿನಗಳ 33ನೇ ವರ್ಷದ ಸಾಂಪ್ರದಾಯಿಕ ‘ಯಕ್ಷೋತ್ಸವ-2025’ ಉದ್ಘಾಟಿಸಿ ಅವರು ಮಾತನಾಡಿದರು. ಮೇಳಗಳು ದೇವಾಲಯಗಳ ಹೆಸರಿನಲ್ಲಿ ಹೊರಡುವ ಕಾರಣದಿಂದಾಗಿ ಯಕ್ಷಗಾನಕ್ಕೆ ದೈವಿಕ ಕಲೆ ಇದೆ. ಯಕ್ಷಗಾನ ಶುದ್ಧ ಕನ್ನಡ ಭಾಷೆಯನ್ನು ಕಲಿಸುವ ಜತೆಗೆ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿಕೊಳ್ಳಲು ಪೂರಕವಾಗಿದೆ ಎಂದರು.ಯಕ್ಷಗಾನ ಕಲಾವಿದ, ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು, ಒಂದು ವರ್ಷದ ಅವಧಿಯಲ್ಲಿ ಅಗಲಿದ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ಲೀಲಾವತಿ ಬೈಪಡಿತ್ತಾಯ, ಗಂಗಾಧರ ಜೋಗಿ ಪುತ್ತೂರು, ಕುಂಬ್ಳೆ ಶ್ರೀಧರ ರಾವ್‌, ಬಂಟ್ವಾಳ ಜಯರಾಮ ಆಚಾರ್ಯ, ಕೀಲಾರು ವಿಜಯಲಕ್ಷ್ಮಿ ಅಮ್ಮ ಮೊದಲಾದ 14ಕ್ಕೂ ಅಧಿಕ ಮಂದಿ ಕಲಾವಿದರಿಗೆ ನುಡಿ ನಮನ ಸಲ್ಲಿಸಿದರು.ಮಂಗಳೂರಿನ ಹಿರಿಯ ವಕೀಲರಾದ ಪಿ. ಸಂತೋಷ ಐತಾಳ ಹಾಗೂ ದಯಾನಂದ ರೈ ಮುಖ್ಯ ಅತಿಥಿಗಳಾಗಿದ್ದರು. ಎಸ್‌ಡಿಎಂ ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಯಕ್ಷೋತ್ಸವ ವಿದ್ಯಾರ್ಥಿ ಸಂಚಾಲಕ ಶಿವತೇಜ ಐತಾಳ್‌ ಇದ್ದರು.ಯಕ್ಷೋತ್ಸವ ಸಂಚಾಲಕ ಪ್ರೊ. ಪುಷ್ಪರಾಜ್‌ ಸ್ವಾಗತಿಸಿದರು. ಸಂಚಾಲಕಿ ಡಾ.ಶುಭಲಕ್ಷ್ಮಿವಂದಿಸಿದರು. ಶ್ರೀಲಕ್ಷ್ಮಿ ಮಠದಮೂಲೆ ನಿರೂಪಿಸಿದರು.

ಎರಡು ದಿನಗಳ ಕಾಲ ನಡೆಯುವ ಯಕ್ಷೋತ್ಸವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಿಂದ ಒಟ್ಟು 10 ಕಾಲೇಜುಗಳು ಭಾಗವಹಿಸಿದ್ದು, ಒಟ್ಟಾಗಿ 8 ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿದೆ.