ಸಾರಾಂಶ
ಯಕ್ಷಗಾನ ಕಲಾಪ್ರಕಾರ ರಂಗಭೂಮಿಯ ಇತರೆ ಪ್ರಕಾರಗಳ ಜೊತೆಗೂ ನಂಟು ಬೆಸೆಯುತ್ತಿರುವುದು ಹೆಗ್ಗಳಿಕೆಯ ಸಂಗತಿ ಎಂದು ಶೈಲೇಶ್ ತೀರ್ಥಹಳ್ಳಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಭಾರತೀಯ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠ ಪರಂಪರೆಯಲ್ಲಿ ಒಂದಾಗಿರುವ ಯಕ್ಷಗಾನ ಕಲಾಪ್ರಕಾರ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ, ರಂಗಾಯಣ, ಹೆಗ್ಗೋಡಿನ ನೀನಾಸಂ ಸೇರಿದಂತೆ ರಂಗಭೂಮಿಯ ಇತರೆ ಪ್ರಕಾರಗಳ ಜೊತೆಗೂ ನಂಟು ಬೆಸೆಯುತ್ತಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ ಎಂದು ಇಲ್ಲಿನ ಯಕ್ಷಗಾನ ಅಧ್ಯಯನ ಕೇಂದ್ರದ ಗುರು ಶೈಲೇಶ್ ತೀರ್ಥಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.ಈಚಿನ ವರ್ಷಗಳಲ್ಲಿ ಯಕ್ಷಗಾನ ಕಲೆಯ ಬಗ್ಗೆ ಮಕ್ಕಳಲ್ಲಿ ವಿಶೇಷ ಆಸಕ್ತಿ ಮೂಡುತ್ತಿದೆ. ನೂರಾರು ವರ್ಷಗಳಿಂದ ಪರಂಪರಾ ಗತವಾಗಿ ಬಂದಿರುವ ಈ ಕಲೆ, ಕೇವಲ ಮನರಂಜನೆಯ ಮಾಧ್ಯಮವಾಗಿರದೇ ಧಾರ್ಮಿಕ ಭಾವನೆಯನ್ನೂ ಮೂಡಿಸುವ ಭಾರತೀಯ ಪರಂಪರೆಯ ಶ್ರೇಷ್ಠ ಕಲೆಯಾಗಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಲೆಯ ಶ್ರೇಷ್ಠತೆಗೆ ಧಕ್ಕೆಯಾಗದಂತೆ ಪರಂಪರೆಯನ್ನು ಯಥಾವತ್ತಾಗಿ ಉಳಿಸಿ ಬೆಳೆಸುವ ಪ್ರಯತ್ನ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿದೆ. ಈಚಿನ ವರ್ಷಗಳಲ್ಲಿ ಯಕ್ಷಗಾನ ಕಲೆ ರಂಗಭೂಮಿಯ ಜೊತೆಗೆ ನಂಟು ಬೆಸೆಯುತ್ತಿದ್ದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆ, ಹೆಗ್ಗೋಡಿನ ನೀನಾಸಂ, ಮೈಸೂರು ಹಾಗೂ ಶಿವಮೊಗ್ಗದ ರಂಗಾಯಣ ಮತ್ತು ಸಾಣೇಹಳ್ಳಿ ಶಿವಕುಮಾರ ರಂಗ ಪ್ರಯೋಗ ಶಾಲೆ ಈ ಎಲ್ಲಾ ಕೇಂದ್ರಗಳಲ್ಲೂ ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಆಸಕ್ತಿ ವ್ಯಕ್ತವಾಗುತ್ತಿದೆ ಎಂದರು.ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವ ಜೂ. 23 ರಂದು ಸಂಜೆ 5.30 ರಿಂದ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದ್ದು ಖ್ಯಾತ ಕಲಾವಿದರಿಂದ ಮಂಥರಾಂತರ ಯಕ್ಷಗಾನ ತಾಳಮದ್ದಲೆ ಮತ್ತು ಕೇಂದ್ರದ ಶಿಕ್ಷಣಾರ್ಥಿಗಳಿಂದ ಮೈಂದ ದ್ವಿವಿದ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ, ಕೂಳೂರು ಸತ್ಯನಾರಾಯಣ ರಾವ್ ಮತ್ತು ನಟಮಿತ್ರರು ಹವ್ಯಾಸಿ ಕಲಾತಂಡದ ಅಧ್ಯಕ್ಷ ಸಂದೇಶ್ ಜವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದರು.
ಯಕ್ಷಗಾನ ಗುರು ರೋಹಿತ್, ಕಲಾವಿದರಾದ ಶಿವಕುಮಾರ್, ವಾಣಿ ಕಾಮತ್ ಮತ್ತು ನಿರಂಜನ ಪವಾರ್ ಇದ್ದರು.