ಸಾರಾಂಶ
ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಉದ್ಘಾಟನೆ ಮತ್ತು ಈ ವರ್ಷದ ತಿರುಗಾಟ ಆರಂಭೋತ್ಸವಕ್ಕೆ ಚಾಲನೆ ದೊರಕಿತು.
ಕಟೀಲು ಏಳನೇ ಮೇಳ ಉದ್ಘಾಟನೆ, ಈ ವರ್ಷದ ತಿರುಗಾಟಕ್ಕೆ ಚಾಲನೆ
ಮೂಲ್ಕಿ: ಕಲಾವಿದರು ರಂಗ ಪರಿಕಲ್ಪನೆಯ ಜೊತೆಗೆ ಪ್ರೇಕ್ಷಕರ ಭಾವುಕ ಶಕ್ತಿಯನ್ನು ಗೌರವಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು. ಯಕ್ಷಗಾನ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಮಾಧ್ಯಮವಾಗಿದ್ದು, ಮುಂದಿನ ಪೀಳಿಗೆಯಲ್ಲೂ ಧಾರ್ಮಿಕ ಶ್ರದ್ಧೆ, ನಂಬಿಕೆ ಬೆಳೆಸಲು ಯಕ್ಷಗಾನ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.ಕಟೀಲು ಕ್ಷೇತ್ರದ ರಥಬೀದಿಯಲ್ಲಿ ಜರುಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಉದ್ಘಾಟನೆ ಮತ್ತು ಈ ವರ್ಷದ ತಿರುಗಾಟ ಆರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಟೀಲಿನ ಯಕ್ಷಗಾನ ಮೇಳಗಳ ಸಂಖ್ಯೆ ಆರರಿಂದ ಏಳಕ್ಕೇರಿದೆ ಎಂದರೆ ಕಲಾಭಿಮಾನಿಗಳ ಭಕ್ತಿ ಎಷ್ಟಿದೆ ಎಂದು ತಿಳಿಯುತ್ತದೆ. ಕಟೀಲಿನ ಅಮ್ಮ ಗರ್ಭಗುಡಿಯಲ್ಲಿ, ರಥಬೀದಿಯಲ್ಲಿ ಭಕ್ತರಿಗೆ ದರ್ಶನ ನೀಡುವುದು ಮಾತ್ರವಲ್ಲದೆ, ಯಕ್ಷಗಾನದ ಮೂಲವೂ ಭಕ್ತರ ಬಳಿಗೆ ಬರುತ್ತಾಳೆ. ಯಕ್ಷಗಾನ ಎಂದರೆ ದೇವರೇ ಊರಿಗೆ ಬರುವ ಕಲ್ಪನೆ ಜನರಲ್ಲಿದೆ. ಯಕ್ಷಗಾನ ದೇವರ ಪರಮಾನುಗ್ರಹದ ಸಂಕೇತವೆಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ ಅಧ್ಯಕ್ಷತೆ ವಹಿಸಿ, ಯಕ್ಷಗಾನದಿಂದ ಅತೀ ಹೆಚ್ಚು ಲಾಭ ನಾನು ಪಡೆದಿದ್ದು, ಮೂರು ಮಹಾಕಾವ್ಯ ಬರೆಯಲು ಕಾರಣ ಯಕ್ಷಗಾನವಾಗಿದೆ. ಒಂದು ಸೂಪರ್ ಹಿಟ್ ಸಿನಿಮಾವನ್ನು ಮೂರು ನಾಲ್ಕು ಬಾರಿ ನೋಡಬಹುದು. ಆದರೆ ದೇವಿ ಮಹಾತ್ಮೆ ಪ್ರಸಂಗವನ್ನು ಎಷ್ಟು ಸಾರಿ ನೋಡಿದರೂ ಸಾಕಾಗುದಿಲ್ಲವೆಂದು ಹೇಳಿದರು.
ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ:ಈ ಸಂದರ್ಭ ಕಟೀಲು ದೇವಳದ ತ್ಯಾಜ್ಯದಿಂದ ಉತ್ಪಾದಿಸಿದ ಶಾಖಾಂಭರಿ ಗೊಬ್ಬರವನ್ನು ಬಿಡುಗಡೆಗೊಳಿಸಲಾಯಿತು. ಮೇಳದ ಕಲಾವಿದ ರವಿಶಂಕರ್‌ವಳ ಕುಂಜ ಅವರು ಬರೆದ ‘ರಂಗ ನಡೆಗೊಂದು ಕೈಪಿಡಿ’ ಮತ್ತು ‘ಪ್ರಸಂಗ ವಾಚಕ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ದುರ್ಗಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರು ಪ್ರಶಸ್ತಿ ಸ್ವೀಕರಿಸಿದರು.ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ರಮಾನಾಥ ರೈ, ಮೋಹನ್ ದಾಸ ಸ್ವಾಮೀಜಿ ಮಾಣಿಲ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ, ಹಿರಿಯ ವಕೀಲರಾದ ಪಿ.ಎಸ್. ರಾಜ್‌ಗೋಪಾಲ್, ಮುಜರಾಯಿ ಇಲಾಖೆಯ ಬಸವರಾಜ್, ಲೋಕೋಪಯೋಗಿ ಇಲಾಖೆಯ ನಾಗೇಂದ್ರ ಪಿ., ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಮಾಜಿ ಮೇಯರ್ ಶಶಿಧರ ಶೆಟ್ಟಿ, ಭಾಸ್ಕರ ಮೊಯ್ಲಿ, ವೇದವ್ಯಾಸ ತಂತ್ರಿ ಶಿಬರೂರು, ಉಮೇಶ್ ಗುತ್ತಿನಾರ್ ಶಿಬರೂರು, ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಮೇಳದ ಸಂಚಾಲಕರು ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಆಡಳಿತ ಮಂಡಳಿ ಪ್ರತಿನಿಧಿ ಕಿಶೋರ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಪ್ರವೀಣ್ ದಾಸ್ ಭಂಡಾರಿ ಕೊಡೆತ್ತೂರುಗುತ್ತು, ಬಿಪಿನ್‌ಚಂದ್ರ ಶೆಟ್ಟಿ ಕೊಡೆತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ವಂದಿಸಿದರು. ಪದ್ಮನಾಭ ಮರಾಠೆ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))