ಯಕ್ಷಗಾನ, ತಾಳಮದ್ದಲೆಯಲ್ಲಿ ತತ್ವ ನೀಡಿದರೆ ಸನ್ಮಾರ್ಗ: ಸ್ವರ್ಣವಲ್ಲೀ ಶ್ರೀ

| Published : Oct 21 2024, 12:49 AM IST

ಸಾರಾಂಶ

ಉಪನಿಷತ್ತಿನ ತತ್ವಗಳನ್ನು ನೀಡುವ ಆಖ್ಯಾನಗಳನ್ನು ರಂಗಕ್ಕೆ ತರುವುದು ವಿರಳ. ಯಕ್ಷಗಾನದ ಅಭಿಮಾನಿ ಆದವನು ಧರ್ಮದ ಅಭಿಮಾನಿ ಕೂಡ ಆಗಿರುತ್ತಾನೆ.

ಶಿರಸಿ: ಯಕ್ಷಗಾನ, ತಾಳಮದ್ದಲೆ ಜತೆ ತತ್ವ ನೀಡಿದರೆ ಸನ್ಮಾರ್ಗಕ್ಕೆ ತೆರಳಲು ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷ ಸಂಭ್ರಮ ಟ್ರಸ್ಟ್ ಹಮ್ಮಿಕೊಂಡ ದಶಕಂ ಧರ್ಮ ಲಕ್ಷ್ಮಣಂ ತಾಳಮದ್ದಲೆ ದಶಾಹದ ಹಿನ್ನೆಲೆಯಲ್ಲಿ ಭಾನುವಾರ ಚಂದು ಬಾಬು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.ಉಪನಿಷತ್ತಿನ ತತ್ವಗಳನ್ನು ನೀಡುವ ಆಖ್ಯಾನಗಳನ್ನು ರಂಗಕ್ಕೆ ತರುವುದು ವಿರಳ. ಯಕ್ಷಗಾನದ ಅಭಿಮಾನಿ ಆದವನು ಧರ್ಮದ ಅಭಿಮಾನಿ ಕೂಡ ಆಗಿರುತ್ತಾನೆ. ಯಕ್ಷಗಾನದ ಮೂಲಕ ಧರ್ಮದ ಪ್ರಚಾರ ಒಳ್ಳೆಯ ಉಪಾಯ. ಧರ್ಮದ ಹತ್ತು ಲಕ್ಷಣದಲ್ಲಿದ್ದಂತೆ ತಾಳಮದ್ದಲೆ ಪ್ರಸಂಗ ಜೋಡಿಸಲಾಗಿದೆ. ಯಕ್ಷಗಾನ ತಾಳಮದ್ದಲೆ ಎಂದರೆ ಅದೊಂದು ಮಾತಿನ ತೋರಣ ಎಂದು ಬಣ್ಣಿಸಿದ ಶ್ರೀಗಳು, ಸಂಸ್ಕೃತ ಜತೆಗಿನ ನಂಟಿನ ಭಾಗವತಿಕೆಯ ನಂಟಿನ ಭಾಗವತರು ಗಣಪತಿ ಭಟ್ಟ ಅವರು. ಅವರಿಗೆ ಪ್ರಶಸ್ತಿ ಸಿಕ್ಕಿದ್ದು ಸಂತಸವಾಗಿದೆ ಎಂದರು.ಪ್ರಶಸ್ತಿ ಸ್ವೀಕರಿಸಿ, ಭಾಗವತ ಗಣಪತಿ ಭಟ್ಟ ಮೊಟ್ಟೆಗದ್ದೆ ಮಾತನಾಡಿ, ಪ್ರದಾನ ಮಾಡಲಾದ ಗುರುಗಳ ಅನುಗ್ರಹ, ಉಪದೇಶ ಮುಖ್ಯ. ಸಾಧಕ ಗುರುಗಳ ಕರದಿಂದ ಸಿಕ್ಕ ಈ ಪ್ರಶಸ್ತಿ ಧನ್ಯತಾ ಭಾವ ಸೃಷ್ಟಿಸಿದೆ. ಹಿಂದಿನ ಕಲಾವಿದರು ಕಲೆಯ ಉಳಿವಿಗೆ ಶ್ರಮಿಸಿದ್ದರ ಪುಣ್ಯದಿಂದ ಇಂದು ನಮಗೆ ಪ್ರಶಸ್ತಿ ಬಂದಿದೆ ಎಂದರು.ಪ್ರಸಿದ್ಧ ಅರ್ಥಧಾರಿ ವಾಸುದೇವ ರಂಗ ಭಟ್ಟ ಮಾತನಾಡಿ, ಹಾಡುಗಾರಿಕೆ ಗಣಪತಿ ಭಟ್ಟ ಅವರ ಬದುಕು ಕಟ್ಟಿಕೊಟ್ಟಿದೆ. ಅವರಿಗೆ ಯಕ್ಷಗಾನದ ಹಾಡೇ ಉಸಿರು ಎಂದು ಬಣ್ಣಿಸಿದರು.ಈ ವೇಳೆ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ಸೀತಾರಾಮ ಚಂದು, ಇಂದಿರಾ ಸೀತಾರಾಮ ಹೆಗಡೆ, ಇಂದಿರಾ ಗ. ಭಟ್ಟ ವೇದಿಕೆಯಲ್ಲಿದ್ದರು. ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಚಾಲಚಂದ್ರ ಹೆಗಡೆ ಕೆಶಿನ್ಮನೆ ವಂದಿಸಿದರು.

ಕಡಲಾಮೆಗಳ ಬಗ್ಗೆ ಕಿರು ಅಧ್ಯಯನ

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಬೀಚಿನ ಕಡಲಾಮೆಗಳ ಬಗ್ಗೆ ಕೈಗೊಂಡ ತಮ್ಮ ಕಿರು ಅಧ್ಯಯನವನ್ನು ಬೆಂಗಳೂರಿನ ವಿದ್ಯಾರ್ಥಿನಿಯೋರ್ವಳು ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಾಗಾರದಲ್ಲಿ ಸ್ಕ್ರಿನ್ ಮೂಲಕ ಪ್ರಸ್ತುತ ಪಡಿಸಿದರು.ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ದೀಪ್ಸಿಕಾ ಶ್ರೀನಿವಾಸ ಅವರು ಕಿರು ಅಧ್ಯಯನ ಪ್ರಸ್ತುತಪಡಿಸಿದ ವಿದ್ಯಾರ್ಥಿನಿ. ಕಡಲಾಮೆ ಮೊಟ್ಟೆ ಇಡುವ ಟೊಂಕಾ ಮರಳು ತೀರದ ಸಂರಕ್ಷಣೆ ಬಗ್ಗೆ ಅವರಿಗಿರುವ ಕಾಳಜಿಗೆ ಟೊಂಕಾ ಖಾರ್ವಿ ವಾಡಾ ಬುದವಂತರಾದ ರಾಜೇಶ ತಾಂಡೇಲ್ ಹರ್ಷ ವ್ಯಕ್ತಪಡಿಸಿದ್ದಾರೆ.