ಸಾರಾಂಶ
ಗುರುಪುರದ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಯಕ್ಷ ವಸುಂಧರ’ ಯಕ್ಷಗಾನ ವಿಚಾರ ಸಂಕಿರಣ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನ ಸಾಂಸ್ಕೃತಿಕವಾಗಿ ಸಮಾಜವನ್ನು ಒಗ್ಗೂಡಿಸುತ್ತದೆ. ಕೇವಲ ಹಿಂದೂಗಳಷ್ಟೇ ಅಲ್ಲ, ಅನ್ಯ ಧರ್ಮಿಯ ಕಲಾವಿದರು ಇಲ್ಲಿ ತೊಡಗಿಸಿಕೊಂಡಿರುವುದು ಈ ಕಲೆಯ ವೈಶಿಷ್ಟ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶನಿವಾರ ಇಲ್ಲಿನ ಗುರುಪುರದ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ ‘ಯಕ್ಷ ವಸುಂಧರ’ ಯಕ್ಷಗಾನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ಬದಲಾವಣೆಯ ಯುಗದಲ್ಲಿ ಯಕ್ಷಗಾನದಲ್ಲೂ ಹಲವಾರು ಬದಲಾವಣೆಯ ಪ್ರಯೋಗಗಳು ನಡೆಯುತ್ತಿವೆ. ಕೆಲವೊಂದು ವಿಚಾರಗಳಲ್ಲಿ ಕಲಾವಿದರು ರಂಗಚೌಕಟ್ಟನ್ನು ಮೀರಿ ಹೋಗುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು ಎಂದು ದೂರುಗಳು ಅಕಾಡೆಮಿಯನ್ನು ತಲುಪಿವೆ. ಈ ಅಭಿಪ್ರಾಯವನ್ನೆಲ್ಲಾ ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಳಿದಡಿಗುತ್ತು ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನವೊಂದು ನಾದ ವಿದ್ಯೆ, ಸಮಾಜದ ಮೃಗೀಯ ಪ್ರವೃತ್ತಿಯನ್ನು ಹತೋಟಿಗೆ ತರುವಂತಹ, ಮನುಷ್ಯನ ಮನಸ್ಸಿನ ಮೇಲೆ ಪ್ರಭಾವ ಬೀರುವ ಪ್ರಾಚೀನ ವಿದ್ಯೆ. ಮಕ್ಕಳಿಗೆ, ಮುಂದಿನ ಜನಾಂಗಕ್ಕೆ ಯಕ್ಷಗಾನ ಮುಂದುವರಿಯಬೇಕು. ಇದರಿಂದ ಸಮಾಜದ ವಿಕೃತಿ ಕಡಿಮೆಯಾಗುತ್ತದೆ ಎಂದರು.ಮುಖ್ಯ ಅತಿಥಿ ವಿಶ್ರಾಂತ ಪ್ರಾಚಾರ್ಯ, ಕಂಬಳದ ಸಂಯೋಜಕ ಗುಣಪಾಲ ಕಡಂಬ, ಗುರುಪುರ ಕಂಬಳದ ಅಧ್ಯಕ್ಷ ಇನಾಯತ್ ಅಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಗುರುಪುರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ, ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್, ಸದಾಶಿವ ಶೆಟ್ಟಿ, ಲಕ್ಷ್ಮೀಶ, ಯಕ್ಷಗಾನ ಅಕಾಡೆಮಿ ಸದಸ್ಯರಾದ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು ಉಪಸ್ಥಿತರಿದ್ದರು.ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯರಾದ ಸತೀಶ್ ಅಡಪ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಕೀನ್ಯಾ ವಂದಿಸಿದರು. ರೋಹಿತ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.ಯಕ್ಷಗಾನ ಕಮ್ಮಟದಲ್ಲಿ ತೆಂಕುತಿಟ್ಟು ಯಕ್ಷಗಾನದ ಸ್ಥಿತ್ಯಂತರಗಳು ಎಂಬ ಶೀರ್ಷಿಕೆಯಡಿ ಹಿರಿಯ ಯಕ್ಷಗಾನ ಕಲಾವಿದ ಡಾ.ತಾರಾನಾಥ ವರ್ಕಾಡಿ ಪ್ರಸ್ತಾವನೆ ಮಂಡಿಸಿದರು. ಭಾಗವತಿಕೆ, ಅರ್ಥಗಾರಿಕೆ, ಮುಖವರ್ಣಿಕೆ, ವೇಷಭೂಷಣ, ಸ್ತ್ರೀ ವೇಷ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಿತು. ಬಲ್ಲಿರೇನಯ್ಯ ಮಿತ್ರ ಮಂಡಳಿ ಬೆಳ್ಮಣ್ ವತಿಯಿಂದ ತಾಳಮದ್ದಲೆ ''''''''ನ್ಯಾಸ ಸಂಪ್ರದಾನ '''''''' ಪ್ರಸ್ತುತಿಗೊಂಡಿತು. ರಾತ್ರಿ ಆಹೋರಾತ್ರಿ ಯಕ್ಷಗಾನ ಪ್ರದರ್ಶನಗೊಂಡಿತು.