ಸಂಭ್ರಮದ ಯಮನೂರೇಶ್ವರ ದೇವರ ಜಾತ್ರಾಮಹೋತ್ಸವ

| Published : Mar 31 2024, 02:10 AM IST

ಸಂಭ್ರಮದ ಯಮನೂರೇಶ್ವರ ದೇವರ ಜಾತ್ರಾಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ದೇವರ ಜಾತ್ರಾಮಹೋತ್ಸವ (ಉರುಸ್‌) ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ದೇವರ ಜಾತ್ರಾಮಹೋತ್ಸವ (ಉರುಸ್‌) ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು.

ಯೋಗಿ ಚಕ್ರವರ್ತಿ ಚಾಂಗದೇವರ ಪುಣ್ಯದಿನ, ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮದ ಕೆಲ ಯಮನೂರೇಶ್ವರ ಭಕ್ತರು ಪಾದಯಾತ್ರೆ ಮೂಲಕ ನಾಗೂರ ಗ್ರಾಮಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರೆ, ಕೆಲ ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಭಕ್ತರು ದೇವರಿಗೆ ಸಕ್ಕರೆ, ಮಾದಲಿ ನೈವೇದ್ಯ ಲೋಭಾನ ಅರ್ಪಿಸಿದರು. ಅಪಾರ ಪ್ರಮಾಣದ ಜನರು ಬಂದ ಹಿನ್ನೆಲೆಯಲ್ಲಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಯಮನೂರೇಶ್ವರನಿಗೆ ಗಂಧ : ಮಲ್ಲಪ್ಪ ಈರಸಂಗಪ್ಪ ಭದ್ರಗೊಂಡ, ಬಸಪ್ಪ ಭದ್ರಗೊಂಡ, ಶಿವಬಸು ಭದ್ರಗೊಂಡ ಅವರ ಮನೆಯಿಂದ ವಿವಿಧ ವಾದ್ಯ ವೈಭವದೊಂದಿಗೆ ಶುಕ್ರವಾರ ರಾತ್ರಿ ಗಂಧವನ್ನು ಮೆರವಣಿಗೆಯಲ್ಲಿ ಹಿಂದು- ಮುಸ್ಲಿಂ ಬಾಂಧವರು ಕೂಡಿಕೊಂಡು ದೇವಸ್ಥಾನಕ್ಕೆ ತಂದರು. ನಂತರ ದರ್ಗಾದ ಮುಜಾವರ್‌ ಬಾಬು ದರ್ಗಾ, ಭಾಷಾಸಾಬ ದರ್ಗಾ, ಕಲಂದರ್‌ ದರ್ಗಾ ನೇತೃತ್ವದಲ್ಲಿ ಯಮನೂರೇಶ್ವರ ದೇವರಿಗೆ ಗಂಧ ಏರಿಸಲಾಯಿತು. ನಂತರ 1111 ದೀಪೋತ್ಸವ ಜರುಗಿದ ನಂತರ ನಾಗೂರಿನ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಉತ್ನಾಳದ ರೇವಣಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದಿಂದ ವಾದಿ-ಪ್ರತಿವಾದಿ ಡೊಳ್ಳಿನ ಗಾಯನ ಜನಮನ ಸೂರೆಗೊಂಡಿತು.

ಜಾತ್ರೆಗೆ ಬಂದಿರುವ ವಿವಿಧ ಮನರಂಜನಾ ಆಟಗಳಲ್ಲಿ ಭಾಗವಹಿಸಿ ಜನರು ಸಂಭ್ರಮಿಸಿದರು. ಟಗರಿನ ಕಾಳಗ, ಭಜನಾ ಪದಗಳು, ಪುಟ್ಟಿ ಗಾಡಿ ರೇಸ್ ಸ್ಪರ್ಧೆ ಜನರನ್ನು ಆಕರ್ಷಿಸಿತು. ಯಮನೂರೇಶ್ವರ ನಾಟ್ಯ ಸಂಘದಿಂದ ಸಿಡಿದೆದ್ದ ಸೂರ್ಯಚಂದ್ರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ಚಂದ್ರಶೇಖರ ಮುಳವಾಡ, ಚಂದ್ರಶೇಖರ ಮರೋಳ, ಮಹೇಶ ಮುಳವಾಡ, ಶರಣು ಮರೋಳ, ಹೈದರ್ ಸುತಾರ, ಯಮನೂರಿ ಪೂಜಾರಿ, ಮಾಂತೇಶ ಗೌರಾ, ಬಂದೇನವಾಜ ವಾಲೀಕಾರ, ಶರಣಪ್ಪ ನಾಲತವಾಡ, ಬಾಬು ಚಪ್ಪರಬಂದ , ಬಸನಗೌಡ ಬಿರಾದಾರ, ಬಸಯ್ಯ ಶೀಕಳವಾಡಿಮಠ, ಶಂಕ್ರೆಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ರಾವುತಪ್ಪ ತೆಲಗಿ, ಮುರ್ತುಜಾ ರಗಟಿ, ಯಮನಪ್ಪ ಪೂಜಾರಿ, ಶಿವಲಿಂಗಪ್ಪ ಹಚ್ಯಾಳ, ಅಪ್ಪು ಲಮಾಣಿ, ಸಂಗಪ್ಪ ಮಾದರ, ಗಿರೆಪ್ಪ ಹೆಬ್ಬಾಳ, ಶಿವಾನಂದ ಬೆಣ್ಣೂರ, ಖಾಜೇಸಾಬ ವಾಲೀಕಾರ, ಶಿವಾನಂದ ಬೆಲ್ಲದ, ಹಣಮಂತ ಬಂಡಿವಡ್ಡರ ಸೇರಿದಂತೆ ಇತರರು ಭಾಗವಹಿಸಿದ್ದರು. ಭಾನುವಾರವೂ ಜಾತ್ರೆಯಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಸರಗಳ್ಳರ ಕೈಚಳಕ: ಜಾತ್ರಾಮಹೋತ್ಸವದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಬಂದ ಅಂದಾಜು ಹತ್ತು ಜನರು ನಾಲ್ಕು ಮಹಿಳೆಯರ ಕೊರಳಲ್ಲಿರುವ ಚಿನ್ನದ ಮಾಂಗಲ್ಯ ಸರ, ಚಿನ್ನದ ಸರ ಸರಗಳ್ಳತನ ಮಾಡಿರುವ ಘಟನೆ ಜರುಗಿದೆ. ಸರಗಳ್ಳತನದಲ್ಲಿ ತೊಡಗಿರುವ ಐದು ಜನರು ಪೊಲೀಸರ ಕೈಗೆ ಸಿಕ್ಕಿದ್ದಾರೆ. ಉಳಿದ ಜನರನ್ನು ಹುಡುಕುವದರಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.