ಯತೀಂದ್ರ ಸಿದ್ದರಾಮಯ್ಯರದು ಯಳಸು ಸ್ಟೇಟ್‌ಮೆಂಟ್

| Published : Oct 24 2025, 01:00 AM IST

ಸಾರಾಂಶ

ರಾಮನಗರ: ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಲ್ಲಿ ಶಕ್ತಿ ಇಲ್ಲ. ಅವರದು ಒಂದು ರೀತಿಯ ಯಳಸು ಸ್ಟೇಟ್ ಮೆಂಟ್ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ರಾಮನಗರ: ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿನಲ್ಲಿ ಶಕ್ತಿ ಇಲ್ಲ. ಅವರದು ಒಂದು ರೀತಿಯ ಯಳಸು ಸ್ಟೇಟ್ ಮೆಂಟ್ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ತಾಲೂಕಿನ ಕೈಲಾಂಚ ಹೋಬಳಿಯ ಗ್ರಾಮಗಳಲ್ಲಿ ವಿವಿಧಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ದೊಡ್ಡ ಮನೆತನದಲ್ಲಿ, ದೊಡ್ಡ ಸ್ಥಾನದಲ್ಲಿದ್ದೀರಿ. ತಾವಾಗಿ ತಾವು ಕೆಳಗಡೆ ಬೀಳೋದು ನಮಗೆ ಇಷ್ಟವಿಲ್ಲ. ಗೌರವಯುತವಾಗಿ ಹೇಳಿಕೆಗಳನ್ನು ಕೊಡಬೇಕು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೋಳಿ ಅವರಿಗೆ ಜವಾಬ್ದಾರಿ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಕ್ಬಾಲ್ ಹುಸೇನ್ ರವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ನಮಗೆಲ್ಲ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.

ಯುವ ಕಾಂಗ್ರೆಸ್ ನಿಂದ ಬಂದಂತಹ ಡಿ.ಕೆ.ಶಿವಕುಮಾರ್ ಅನೇಕ ಹುದ್ದೆಗಳನ್ನು ನಿಭಾಯಿಸುವ ಜೊತೆಗೆ ಸಂಕಷ್ಟಗಳನ್ನು ಎದುರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೂ ಗೊಂದಲದ ಹೇಳಿಕೆ ಕೊಡಬಾರದು. ಯತೀಂದ್ರ ಅವರು ತಿದ್ದುಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಕೆಪಿಸಿಸಿಯಿಂದ ಯತೀಂದ್ರ ಅವರಿಗೆ ನೋಟಿಸ್ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಮಾಡಿದರೆ ಬಲತ್ಕಾರ, ಬೇರೆಯವರು ಮಾಡಿದರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ. ಅವೆಲ್ಲವನ್ನೂ ಹೇಳಬಾರದು, ಅವರು ತಿದ್ದುಕೊಳ್ಳುತ್ತಾರೆ. ಇನ್ನು ಮುಂದಾದರು ಯಾವುದೇ ರೀತಿಯ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ತಿಳಿಸಿದರು.

ಕೈಲಾಂಚ ಹೋಬಳಿಯ ಅಂಕನಹಳ್ಳಿ ಕೈಲಾಂಚ ಮಾರ್ಗದ 3 ಕಿ.ಮೀಟರ್ ಡಾಂಬರೀಕರಣ, 99 ಲಕ್ಷ ವೆಚ್ಚದಲ್ಲಿ ಎಸ್‌ಆರ್‌ಎಸ್ ಬೆಟ್ಟ ರಸ್ತೆಯಿಂದ ಪೂಜಾರಿದೊಡ್ಡಿ- ನೆಲಮಲೆ ಮಾರ್ಗವಾಗಿ ಹೊಸಹಳ್ಳಿ ಸೇರುವ ರಸ್ತೆ ಡಾಂಬರೀಕರಣ, 2.70 ಕೋಟಿ ವೆಚ್ಚದಲ್ಲಿ ಹೊಸದೊಡ್ಡಿ ಮಾರ್ಗವಾಗಿ ನಂಜಾಪುರ ರಸ್ತೆ ಮರು ನಿರ್ಮಾಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ನಿರ್ಮಾಣ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಕೈಲಾಂಚ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಗ್ರಾಪಂ ಸದಸ್ಯರಾದ ಧನರಾಜು, ದಾಸೇಗೌಡ, ಮುಖಂಡರಾದ ಹೊಸೂರು ಜಗದೀಶ್, ಪಾರ್ಥ, ಗಿರಿ, ಮಹೇಂದ್ರ, ಮಹೇಶ್, ಸಿದ್ದು ಸೇರಿದಂತೆ ಹಲವರು ಹಾಜರಿದ್ದರು.

23ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಕೈಲಾಂಚ ಹೋಬಳಿ ಅಂಕನಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಕೈಲಾಂಚ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಗ್ರಾಪಂ ಸದಸ್ಯರಾದ ಧನರಾಜು, ದಾಸೇಗೌಡ, ಮುಖಂಡರಾದ ಹೊಸೂರು ಜಗದೀಶ್ ಇತರರಿದ್ದರು.