ಸಿದ್ದರಾಮಯ್ಯಗೆ ಬೆಂಬಲ ನೀಡದೇ 36 ಜನ ಶಾಸಕರ ಸಹಿ ಮಾಡಿಸಿದ್ದಾರೆಂದು ಯತ್ನಾಳ ಹೇಳಿಕೆ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಹಾಗೂ ನಮ್ಮ ಉನ್ನತ ನಾಯಕರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಮ್ಮ ನಾಯಕರು. ಹಿಂದೆ, ಈಗ ಹಾಗೂ ಮುಂದೆಯೂ ಇವರಿಬ್ಬರೂ ನಮ್ಮ ನಾಯಕರು. ಯತ್ನಾಳ ಬಾಯಿಗೆ ಬಂದಂತೆ ಮಾತನಾಡುವ ಬಕಾಸುರ ಎಂದು ಸಚಿವ ಎಂ.ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯಗೆ ಬೆಂಬಲ ನೀಡದೇ 36 ಜನ ಶಾಸಕರ ಸಹಿ ಮಾಡಿಸಿದ್ದಾರೆಂದು ಯತ್ನಾಳ ಹೇಳಿಕೆ ಸುಳ್ಳು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಹಾಗೂ ನಮ್ಮ ಉನ್ನತ ನಾಯಕರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನಮ್ಮ ನಾಯಕರು. ಹಿಂದೆ, ಈಗ ಹಾಗೂ ಮುಂದೆಯೂ ಇವರಿಬ್ಬರೂ ನಮ್ಮ ನಾಯಕರು. ಯತ್ನಾಳ ಬಾಯಿಗೆ ಬಂದಂತೆ ಮಾತನಾಡುವ ಬಕಾಸುರ ಎಂದು ಸಚಿವ ಎಂ.ಬಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯೋಕೆ ಜಮೀರ್‌, ಸತೀಶ ಜಾರಕಿಹೊಳಿ ಎಂ.ಬಿ. ಪಾಟೀಲ ಬೆಂಬಲಿಸಲಿಲ್ಲ ಎಂದು ನಗರ ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿವಾಗಿ ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಣ್ಣಪುಟ್ಟ ಮುನಿಸುಗಳಿರುತ್ತವೆ ಎಂದರು.ಎಲ್ಲವೂ ಸರಿಯಾಗಿವೆ ಇದು ಸಹಜ. ನಮ್ಮ ಪಕ್ಷದಲ್ಲಿ ಯಾವುದೇ ಸಹಿ ಮಾಡುವ ಪದ್ಧತಿಯಿಲ್ಲ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಹೈಕಮಾಂಡ್ ನಿರ್ಧಾರ. ಸ್ವತಃ ರಾಹುಲ್‌ ಗಾಂಧಿಯವರೇ ಚುನಾವಣೆ ರಾಜಕೀಯದಿಂದ ಸಿದ್ದರಾಮಯ್ಯ ಹಿಂದೆ ಸರಿಯಬಾರದು ಎಂದಿದ್ದಾರೆ. ಸಿದ್ದರಾಮಯ್ಯರನ್ನ ಕರೆಸಿಕೊಂಡು ರಾಹುಲ್‌ ಗಾಂಧಿ ಮಾತನಾಡಿದ್ದಾರೆ, ಬಾಯಿಗೆ ಬಂದಂತೆ ಮಾತನಾಡುವುದೇ ಯತ್ನಾಳ ಚಾಳಿಯಾಗಿದೆ. ಹಿಂದೆ ತಮ್ಮನ್ನು ಹೊಗಳಲು ಎಂ.ಬಿ. ಪಾಟೀಲರು ಕರೆಸಿಕೊಂಡಿದ್ದರು ಎಂದು ಭಾಷಣ ಮಾಡಿದ್ದರು. ನನಗೆ ಹೊಗಳಿಸಿಕೊಳ್ಳುವ ಖಯಾಲಿ ಇಲ್ಲ ಎಂದರು.

ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿಗಳೇ ನನ್ನನ್ನು ಹೊಗಳಿದ್ದಾರೆ. ಶ್ರೀಗಳ ಮಾತು ನನಗೆ ನೊಬೆಲ್ ಪ್ರಶಸ್ತಿಗಿಂತ ಡೊಡ್ಡದು. ಸ್ವಯಂ ಘೋಷಿತ ಹಿಂದೂ ಹುಲಿ ಜೆಡಿಎಸ್‌ನಲ್ಲಿದ್ದಾಗ ನಮಾಜ್ ಮಾಡಿದ್ದರು, ತಲೆಗೆ ಟೋಪಿ ಹಾಕಿದ್ದರು. ಹಿಂದೆ ಬಿಜೆಪಿಯಿಂದ ಹೊರ ಬಂದಾಗ ನಾವೆಲ್ಲ ಬೆಂಬಲಿಸಿದ ಕಾರಣ ಎಂಎಲ್‌ಸಿ ಆಗಿದ್ದರು. ಎಂಎಲ್‌ಸಿ ಚುನಾವಣೆಯಲ್ಲಿ ಸಹಾಯ ಮಾಡಿ ಎಂದು ಯತ್ನಾಳ ನಮ್ಮ ಬಳಿ ಬಂದು ಸಹಾಯ ಯಾಚನೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಸೋಲಿಸೋಕೆ ನಾವೆಲ್ಲ ಸೇರಿ ಎರಡನೇ ಪ್ರಾಶಸ್ತ್ಯ ಮತ ಹಾಕಿ ಗೆಲ್ಲಿಸಿದ್ದೇವೆ ಎಂದು ಹೇಳಿದರು.

ಕೋಮುವಾದಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸೋಕೆ ಯತ್ನಾಳಗೆ ಬೆಂಬಲಿಸಿ ಗೆಲ್ಲಿಸಿದ್ದನ್ನು ಯತ್ನಾಳ ಮರೆಯಬಾರದು. ಎಂಎಲ್‌ಸಿ ಚುನಾವಣೆಯಲ್ಲಿ ಸಪೋರ್ಟ್ ಮಾಡಿದ್ದಕ್ಕೆ ನಾವು ಅಪಪ್ರಚಾರ ಎದುರಿಸುವಂತಾಗಿತ್ತು, ಎಂಎಲ್‌ಸಿ ಆದ ಬಳಿ ಯಡಿಯೂರಪ್ಪರ ಸಹಾಯದಿಂದ ವಾಪಸ್ ಬಿಜೆಪಿ ಸೇರಿದರು. ಆಗ ಜಗದೀಶ ಶೆಟ್ಟರ, ಪ್ರಹ್ಲಾದ್ ಜೋಶಿ ಹಾಗೂ ಇತರರು ಯತ್ನಾಳ ವಾಪಸಾತಿ ವಿರೋಧಿಸಿದ್ದರು. ಎಲ್ಲರ ವಿರೋಧದ ಮಧ್ಯೆಯೂ ಯಡಿಯೂರಪ್ಪನವರು ಯತ್ನಾಳರನ್ನು ಬಿಜೆಪಿಗೆ ಸೇರಿಸಿಕೊಂಡರು. ನಂತರ ಅದೇ ಯಡಿಯೂರಪ್ಪ ವಿರುದ್ಧ ಯತ್ನಾಳ ತಿರುಗಿ ಬಿದ್ದರು. ಅವರಂತೆ ನಾನಲ್ಲ. ಸಿದ್ದರಾಮಯ್ಯ ಸಿಎಂ ಆಗಿರಲಿ ಆಗದೇ ಇರಲಿ ಅವರೇ ನಮ್ಮ ನಾಯಕರು ಎಂದು ಸ್ಪಷ್ಟಪಡಿಸಿದರು.

ಜಮೀರ್‌ ಅಹ್ಮದ್, ಸತೀಶ ಜಾರಕಿಹೋಳಿ ಯಾರೊಬ್ಬರು ಅವರಿಗೆ ವಿರೋಧ ಮಾಡಿಲ್ಲ. ದಾವಣಗೆರೆ ಉಪಚುನಾವಣೆ ವಿಚಾರದಲ್ಲಿ ಜಮೀರ್‌ ಹಾಗೂ ಸಿದ್ದರಾಮಯ್ಯ ಮಧ್ಯೆ ಗೊಂದಲಾಗಿದ್ದು ನಿಜ. ಆದರೆ ನಮ್ಮ ಯಾರ ಮಧ್ಯೆಯೂ ಭಿನ್ನಾಭಿಪ್ರಾಯಗಳಿಲ್ಲ. ಈ ರೀತಿ ಮಾತಾಡೋದನ್ನ ಯತ್ನಾಳ ನಿಲ್ಲಿಸಬೇಕು. ಇಲ್ಲವಾದರೆ ನಾವು ಬೇರೆ ದಾರಿ ಹಿಡಿಯಬೇಕಾಗುತ್ತದೆ. ನಮ್ಮ ಸಪೋರ್ಟ್‌ನಿಂದ ಎಂಎಲ್‌ಸಿ ಆಗಿರುವ ಇವರು ಈ ಬಾರಿ ಇನ್ನೊಮ್ಮೆ ಎಂಎಲ್‌ಎ ಆಗಿ ತೋರಿಸಲಿ ನೊಡೋಣ ಎಂದು ಎಚ್ಚರಿಸಿದರು.

ಸಿಎಂ ಆಗಿ ಡಿ.ಕೆ. ಶಿವಕುಮಾರ್‌ 100 ದಿನಗಳ ಸಾಧನೆ ಕಾರ್ಯಕ್ರಮಕ್ಕೆ ಕಡೆಗಣಿಸಿದ್ದರ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅಸಮಾಧಾನ ಹೊರಹಾಕಿದ ವಿಚಾರವಾಗಿ ಮಾತನಾಡಿ, ಹರಿಪ್ರಸಾದ ಅವರ ಅಸಮಾಧಾನ ಕುರಿತು ನನಗೆ ಮಾಹಿತಿಯಿಲ್ಲ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಸುಪ್ರೀಂ. ಸಿಎಂ ಅವರಿಗಿಂತ ನಮ್ಮ ಪಕ್ಷದ ರಾಜ್ಯಾಧ್ಯಕ್ಷರೇ ಸುಪ್ರೀಂ. ಏನಾಗಿದೆ ಎಂಬ ವಿಷಯ ನನಗೆ ಗೊತ್ತಿಲ್ಲ, ಅಂಥದ್ಯಾವುದೂ ಆಗಿರೋಕೆ ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ನೀಡಬೇಕಾಗಿದ್ದು ಸಿಎಂ ಆದಿಯಾಗಿ ನಮ್ಮೆಲ್ಲರ ಕರ್ತವ್ಯ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.