ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಭಿವೃದ್ಧಿಗೆ ಹೆಸರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ವಿಷಯವಾದರೂ ಸರಿ ಮಾಡಬೇಕು ಎಂದು ತೀರ್ಮಾನ ಮಾಡಿದರೆ ಮುಗಿತು. ಅದರಿಂದ ಯಾವತ್ತು ಹಿಂದೆ ಸರಿದವರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.ಇಲ್ಲಿನ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಬಳಗದಿಂದ ಶನಿವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದುತ್ವವನ್ನು ರಕ್ಷಣೆ ಮಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಏನೂ ಅಲ್ಲ ಎನ್ನುವ ಕಾಲದಲ್ಲಿ ಶಿಕಾರಿಪುರ ಪುರಸಭೆ ಅಧ್ಯಕ್ಷರಾದ ಬಳಿಕ ಅವರ ಮೇಲೆ ಹಲ್ಲೆ ನಡೆದಾಗಲೂ ಪುನರ್ಜನ್ಮದಂತೆ ಬದುಕಿ ಬಂದ ಯಡಿಯೂರಪ್ಪ ಅವರು, ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ 40 ವರ್ಷಗಳ ಕಾಲ ಹೋರಾಟ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ನಾಯಕ. ಅಲ್ಲಿಂದ ಈವರೆಗೆ ಪಕ್ಷ ಅನೇಕ ಸೋಲು- ಗೆಲುವನ್ನು ನೋಡಿದೆ. ಆದರೆ, ಕಳೆದ ಬಾರಿ ವಿಧಾನಸಭೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಾಗ ಇನ್ನೊಂದು ವರ್ಷದಲ್ಲಿ ಪಕ್ಷವನ್ನು ಪುನಃ ಕಟ್ಟಿ ಲೋಕಸಭೆಯಲ್ಲಿ ನಿಮಗೆ ಉತ್ತರವನ್ನು ಕೊಡುತ್ತೇವೆ ಎಂದು ಯಡಿಯೂರಪ್ಪ ಅವರು ಶಪಥವನ್ನು ಸ್ವೀಕರಿಸಿ, ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆಲ್ಲಿಸುವ ಮೂಲಕ ಅವರು ಅಂದುಕೊಂಡಿದ್ದ ಸಾಧಿಸಿ ತೋರಿಸಿದ ಛಲಗಾರ ಎಂದು ಬಣ್ಣಿಸಿದರು.ಸಕಾಲಕ್ಕೆ ಕೆಲಸವಾಗಿಲ್ಲ ಎಂದರೆ ಬೇಗ ಕೋಪ ಮಾಡಿಕೊಳ್ಳುವ ಯಡಿಯೂರಪ್ಪ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಆದರೆ, ದೀರ್ಘ ದ್ವೇಷಿ ಅಲ್ಲ. ವೈಯಕ್ತಿಕವಾಗಿ ಯಾರ ಮೇಲೂ ಎಂದೂ ದ್ವೇಷ ಮಾಡಿದವರಲ್ಲ. ಪಕ್ಷ ಸೋತಾಗ ಯುವಕರೆಲ್ಲ ದುಃಖದಲ್ಲಿ ಒಳಗೆ ಕೂತಿದ್ದರೆ, 80 ವರ್ಷದ ಯುವಕ ಯಡಿಯೂರಪ್ಪ ಅವರು, ನಾನು ಪಕ್ಷವನ್ನು ಕಟ್ಟುತ್ತೇನೆ ಬನ್ನಿ ಎಂದು ಹೊರಗೆ ಬಂದು ಹೇಳಿದವರು. ಯಡಿಯೂರಪ್ಪರಂಥ ನಾಯಕರು ಅಧಿಕಾರದಲ್ಲಿ ಇದ್ದರೆ ಜಿಲ್ಲೆ ಮತ್ತು ರಾಜ್ಯವನ್ನು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯವೇ ಸಾಕ್ಷಿಯಾಗಿದೆ ಎಂದರು.
ರೈತ ಹೋರಾಟದಿಂದಲೇ ಬೆಳೆದುಬಂದ ನಾಯಕ ಯಡಿಯೂರಪ್ಪ ಅವರು ರೈತರಿಗಾಗಿ ಮೊದಲ ಬಾರಿ ಕೃಷಿ ಬಜೆಟ್ ಕೊಟ್ಟು ಇತಿಹಾಸ ಪುಟದಲ್ಲಿ ಉಳಿಯುಂಥ ಕೆಲಸವನ್ನು ಮಾಡಿ ತೋರಿಸಿದವರು. ವಿರೋಧ ಪಕ್ಷದಲ್ಲಿದ್ದಾಗ ಅವರು ಯಾವ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದರೋ ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಪೂರೈಸುತ್ತಿದ್ದರು. ಅದು ಅವರು ರಾಜಕೀಯ ಸಿದ್ದಾಂತವೂ ಆಗಿತ್ತು. ಯಡಿಯೂರಪ್ಪ ಗುಡುಗಿದರೆ ವಿಧಾನ ಸೌಧ ನಡುಗುವುದು ಎಂಬ ಕೂಗಿಗೆ ತಕ್ಕದಾಗೆ ಅವರು ನಡೆದುಕೊಂಡ ಶ್ರೇಷ್ಟ ನಾಯಕ ಎಂದು ವರ್ಣಿಸಿದರು.ಟಾಪ್-10 ಎಂಪಿಗಳಲ್ಲಿ ರಾಘವೇಂದ್ರ:
ನಾನು ಕೇಂದ್ರ ಸಚಿವರಾಗಿ ಅನೇಕ ಸಂಸದರನ್ನು ನೋಡಿದ್ದೇನೆ. ಆದರೆ, ಕ್ಷೇತ್ರದ ಅಭಿವೃದ್ದಿಗಾಗಿ ಇಷ್ಟೊಂದು ಕ್ರೀಯಾಶೀಲವಾಗಿ ಕೆಲಸ ಮಾಡುವಂತ ದೇಶದ 10 ಜನ ಸಂಸದರನ್ನು ಗುರುತಿಸಿದರೆ ಅದರಲ್ಲಿ ಸಂಸದ ಬಿ.ವೈ. ರಾಘವೇಂದ್ರರೂ ಒಬ್ಬರು. ಅವರನ್ನು ಹೊಗಳಿ ನನಗೆ ಆಗಬೇಕಿದ್ದು ಏನೂ ಇಲ್ಲ. ಅವರು ಮಾಡಿರುವ ಅನೇಕ ಕೆಲಸಗಳೇ ಅವರ ಸಾಧನೆಯನ್ನು ಹೇಳುತ್ತವೆ. ನನ್ನ ಕಚೇರಿಯಲ್ಲೆ ನನ್ನ ಮೂಲಕ ರೈಲ್ವೆ ಸಚಿವರನ್ನು ಭೇಟಿ ಅವರಿಂದ ಕೆಲಸ ಮಾಡಿಸಿಕೊಳ್ಳುವ ಕ್ರೀಯಾಶೀಲ ವ್ಯಕ್ತಿ ಎಂದರು.ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಪ್ರಮುಖರಾದ ಆಶೋಕ್ ಹಾರನಹಳ್ಳಿ, ನಟರಾಜ್ ಭಾಗವತ್, ಪದ್ಮನಾಬ್ ಭಟ್, ರಾಮಚಂದ್ರ, ದತ್ತಾತ್ರಿ, ಡಾ.ಪಿ.ನಾರಾಯಣ್, ಎಂ.ಶಂಕರ್, ವೆಂಕಟೇಶ್ ಮತ್ತಿತರರು ಇದ್ದರು.
- - -ಬಾಕ್ಸ್-1 ರಾಜ್ಯಾಧ್ಯಕ್ಷ ಎಂದಾಗ ಆಶ್ಚರ್ಯವಾಗಿತ್ತು: ಬಿಎಸ್‌ವೈ
ಸನ್ಮಾನ ಸ್ವೀಕರಿಸ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಮತ್ತೂರಿನಲ್ಲಿ ಒಂದು ಸಂಘದ ಶಾಖೆಯಲ್ಲಿ ಇದ್ದ ಸಂದರ್ಭದಲ್ಲಿ ನಾರಾಯಣ್‌ರವರು ನನ್ನನ್ನು ಕರೆಸಿಕೊಂಡು ಪಕ್ಷದ ರಾಜ್ಯದ ಅಧ್ಯಕ್ಷನಾಗಬೇಕು ಎಂದಾಗ ಆಶ್ಚರ್ಯವಾಗಿತ್ತು. ನಾನಿನ್ನು ರಾಜ್ಯವನ್ನು ಸುತ್ತಿಲ್ಲ, ರಾಜ್ಯದ ಮೂಲೆ ಮೂಲೆ ಗೊತ್ತಿಲ್ಲ. ಈ ಜವಬ್ದಾಋಿ ಬೇಡ ಎಂದರೂ ನನಗೆ ಈ ಜವಬ್ದಾರಿ ಕೊಟ್ಟು ನಾನು ಈ ಮಟ್ಟಕ್ಕೆ ಬರಲು ಅವಕಾಶ ಮಾಡಿಕೊಟ್ಟರು. ಹಿರಿಯೂರು ಕೃಷ್ಣ ಮೂರ್ತಿಗಳು ಎಲ್ಲ ಹಂತದಲ್ಲೂ ಮಾರ್ಗದರ್ಶನ ಮಾಡಿದ ಪರಿಣಾಮ ಇವತ್ತು ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುವ ಶಕ್ತಿ ನನಗೆ ಸಿಕ್ಕಿದೆ. ದಿ.ಅನಂತ್‌ಕುಮಾರ್‌ರಾಜ್ಯವನ್ನು ಸುತ್ತಿ ಪಕ್ಷವನ್ನುಕಟ್ಟುವುದಕ್ಕೆ ದೊಡ್ಡ ಅವಕಾಶವನ್ನು ಮಾಡಿಕೊಟ್ಟರು. ಹಿಂದು ಧರ್ಮ ಸನಾತನವಾಗಿದ್ದು, ಪುರತಾನ ಧರ್ಮವಾಗಿದೆ. ಅಷ್ಟೇ ಪುರಾತವಾದದ್ದು ಬ್ರಾಹ್ಮಣ ಸಮುದಾಯ. ಭಾರತದಲ್ಲಿ ಬ್ರಾಹ್ಮಣ ಪಂಗಡಗಳ ಇತಿಹಾಸ ವೈದಿಕ ಧರ್ಮದ ಕಾಲದಿಂದ ಪ್ರಾರಂಭವಾಗುತ್ತದೆ. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ರಾಮಯಣ, ಮಹಾಭಾರ ಹಾಗೂ ವೇದ-ಉಪನಿಷತ್‌ಗಳಲ್ಲಿ ಪರಿಹಾರ ಇದೆ ಎಂದರು.- - - ಬಾಕ್ಸ್-2 ವಿಪ್ರರ ನಂಬಿಕೆ ಉಳಿಸಿಕೊಳ್ಳುತ್ತೇನೆ: ಸಂಸದ ಭವಿಷ್ಯದಲ್ಲಿ ಶಿವಮೊಗ್ಗಕ್ಕೆ ಏನು ಕೆಲಸಗಳಾಗಬೇಕು ಎಂಬುದನ್ನು ಇಂದಿನ ಸಭೆಯಲ್ಲಿ ಅನೇಕರು ಪ್ರಸ್ತಾಪಿಸಿದ್ದಾರೆ. ಅದನ್ನು ಅನುಷ್ಠಾನಗೊಳಿಸಲು ಮುಂದೆ ಪ್ರಾಮಾಣಿಕ ಪ್ರಯತ್ನ ಮಾಡುವು ಮೂಲಕ ವಿಪ್ರ ಸಮಾಜ ನನ್ನ ಮೇಲೆ ಇರಿಸಿರುವ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಬೆಳಗಾವಿಯಲ್ಲಿ ವಿಕಾಸ ಸೌಧ, ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಹಾಗೂ ಚೆನ್ನೈನಲ್ಲಿ ಸರ್ವಜ್ಞನ ಪ್ರತಿಮೆ ಸ್ಥಾಪನೆ, ತಾಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಲಕ್ಷ ರೂ., ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಐದು ಲಕ್ಷ ರು. ಘೋಷಣೆ ಮಾಡಿದ್ದು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಾಗಿದ್ದಾರೆ ಎಂದರು.ಇಂದು ವಿಪ್ರ ಸಮಾಜದ ಅನೇಕ ಹಿರಿಯರು ನಮ್ಮ ನಡುವೆ ಇಲ್ಲ. ಎಂ.ಆನಂದ ರಾವ್, ಹೊ.ನ.ನರಸಿಂಹಮೂರ್ತಿ ಅಯ್ಯಂಗಾರ್, ಅ.ಪ. ರಾಮಭಟ್ಟ ಮುಂತಾದ ಅನೇಕರ ಪರಿಶ್ರಮದಿಂದ ಇಂದು ಪಕ್ಷ ಹಾಗೂ ವೈಯಕ್ತಿಕವಾಗಿ ನಮಗೂ ಅನುಕೂಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರ ಉತ್ತಮವಾದ ವಾತಾವರಣವಿದೆ. ಅದನ್ನು ಮತವಾಗಿ ಪರಿವರ್ತನೆ ಆಗುವಲ್ಲಿ ವಿಪ್ರ ಸಮಾಜದ ಕೊಡುಗೆ ಮಹತ್ವದ್ದಾಗಿದೆ. ಮೋದಿ ಅವರಿಗೆ ಕೆಡುಕು ಬಯಸುತ್ತಿರುವವರು ಅನೇಕರಿದ್ದಾರೆ. ಹೀಗಾಗಿ, ನಮ್ಮ ಆತ್ಮವಿಶ್ವಾಸ ಹುಸಿಯಾಗದೇ ಇರುವಂತೆ ನಾವು ಮುಂದಿನ 40 ದಿನ ಕಾರ್ಯನಿರ್ವಹಿಸಬೇಕಿದೆ ಎಂದು ತಿಳಿಸಿದರು.
- - - -9ಎಸ್‌ಎಂಜಿಕೆಪಿ08:ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಬಳಗದಿಂದ ಶನಿವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು. -9ಎಸ್‌ಎಂಜಿಕೆಪಿ09:
ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಬಳಗದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ಆಶೋಕ್ ಹಾರನಹಳ್ಳಿ, ನಟರಾಜ್ ಭಾಗವತ್, ಪದ್ಮನಾಬ್ ಭಟ್ ಮತ್ತಿತರರು ಇದ್ದರು.