ಸಾರಾಂಶ
ತುಮಕೂರು : ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರೀ ಪ್ರಮಾಣದ ಗುಡುಗು- ಸಿಡಿಲು ಸಹಿತ ಗಾಳಿ- ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲಾ/ತಾಲೂಕು/ಗ್ರಾಮಮಟ್ಟದ ಅಧಿಕಾರಿ/ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ ಈವರೆಗೆ ಶೇ.86ರಷ್ಟು ಅಧಿಕ ಮಳೆಯಾಗಿದ್ದು, ಪ್ರವಾಹ/ಭಾರೀ ಮಳೆಯಿಂದ ಯಾವುದೇ ಜನ-ಜಾನುವಾರುಗಳ ಜೀವ ಹಾನಿಯಾಗದಂತೆ ಮುಂಜಾಗ್ರತೆ ವಹಿಸಬೇಕು. ಭಾರೀ ಮಳೆ/ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು/ ಮೈಕ್ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ನಿರಂತರ ಮಳೆಯಿಂದ ದುರ್ಬಲ ಮಣ್ಣಿನ ಮನೆ/ ಕಟ್ಟಡ, ಮರದ ಕೊಂಬೆ, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರುವ ಬಗ್ಗೆ ಎಚ್ಚರವಹಿಸಲು ವ್ಯಾಪಕ ಪ್ರಚಾರ ನೀಡಬೇಕು. ಶಾಲಾ/ ಅಂಗನವಾಡಿ ಮೇಲ್ಛಾವಣಿ/ ಗೋಡೆ ಹಾಗೂ ನದಿ/ ಹಳ್ಳ/ ಕೆರೆ/ ಕಟ್ಟೆ/ ರಸ್ತೆ/ ಸೇತುವೆ/ ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಭೂತ ಸೌಕರ್ಯಗಳ ಸುಸ್ಥಿತಿ ಬಗ್ಗೆ ಪರಿಶೀಲಿಸಬೇಕು ಎಂದರು.
ಹಠಾತ್ ಪ್ರವಾಹವಾಗುವ ತಗ್ಗು ಪ್ರದೇಶದ ವಾರ್ಡ್/ ಅಂಡರ್ ಪಾಸ್/ ರಸ್ತೆಗಳ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಅರ್ಹ ಪ್ರಕರಣಗಳಿಗೆ ನಿಯಮಾನುಸಾರ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತುರ್ತು ಪರಿಹಾರ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಸಿಡಿಲು ಸಹಿತ ಮಳೆಯಾಗುವುದರಿಂದ ಸಿಡಿಲು ಬಡಿಯುವ ಪ್ರದೇಶದ ಬಗ್ಗೆ ರಾಜ್ಯದಿಂದ ಮುಂಚಿತವಾಗಿ ಸಾರ್ವಜನಿಕರಿಗೆ ಎಸ್‌ಎಂಎಸ್ ಅಲರ್ಟ್ ರವಾನಿಸಲಾಗುವುದು. ಸಾರ್ವಜನಿಕರು ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರಬೇಕು. ತುರ್ತಾಗಿ ಸುರಕ್ಷಿತವಾದ ತಗ್ಗು ಪ್ರದೇಶಕ್ಕೆ ತೆರಳಬೇಕು. ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು. ಲೋಹದ ತಗಡು ಮನೆಗಳು, ಮರ, ವಿದ್ಯುತ್ ಉಪಕರಣ/ಸರಬರಾಜು, ಮಾರ್ಗ/ ಕಂಬ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಜಲಕಾಯಗಳು ಸೇರಿದಂತೆ ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಕಬ್ಬಿಣದ ಸರಳುಗಳ ಛತ್ರಿ/ ಮೊಬೈಲ್ ಫೋನ್ ಬಳಸಬಾರದು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದಂತೆ, ಜನ ಸಂದಣಿಯಾಗದಂತೆ ಅಂತರ ಕಾಪಾಡಬೇಕು. ತುರ್ತು ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಹೊಂದಿರಬೇಕೆಂದು ಅವರು ಮನವಿ ಮಾಡಿದ್ದಾರೆ.
ನದಿ, ಹಳ್ಳ ಕೆರೆ ದಡಗಳಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ- ಕರುಗಳನ್ನು ತೊಳೆಯುವುದು ಹಾಗೂ ಫೋಟೋ/ ಸೆಲ್ಫಿಗಳನ್ನು ತೆಗೆಯುವುದು, ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸುವುದು ಮತ್ತು ಇತರೆ ಚಟುವಟಿಕೆ ನಡೆಸದಂತೆ ಎಚ್ಚರವಹಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಅಪಾಯಕಾರಿಯಾಗಿ ಹರಿಯುವ ನೀರು ಮತ್ತು ಕೆರೆ/ ಕಟ್ಟೆಗಳಲ್ಲಿ ಈಜಲು ಬಿಡದಂತೆ ಜಾಗೃತಿವಹಿಸಬೇಕು. ದುರ್ಬಲ ಮಣ್ಣಿನ ಮನೆ/ ಕಟ್ಟಡ, ಮರದ ಕೊಂಬೆ, ಜಲಕಾಯ, ವಿದ್ಯುತ್ ವಸ್ತುಗಳಿಂದ ದೂರವಿರಬೇಕು. ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿರಸಬೇಕು. ತೋಟಗಾರಿಕೆ ಬೆಳೆಗಳನ್ನು ಮಳೆಗೆ ಹಾನಿಯಾಗದಂತೆ ಸೂಕ್ತ ರೀತಿಯಲ್ಲಿ ಸಂರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.