ಹೌದು ನಾನು ಶಿಕ್ಷಣ ಕ್ಷೇತ್ರದ ಪಿಆರ್‌ಒನೇ: ಪುಟ್ಟಣ್ಣ

| Published : Feb 10 2024, 01:50 AM IST

ಸಾರಾಂಶ

ರಾಮನಗರ: ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ರವರಿಗೆ ಶಿಕ್ಷಣ ಕ್ಷೇತ್ರದ ಗಂಧ ಗಾಳಿಯೇ ಗೊತ್ತಿಲ್ಲ. ಆದರೆ, ನಾನು ಶಿಕ್ಷಕರ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹೀಗಾಗಿ ನಾನೇ ಶಿಕ್ಷಣ ಕ್ಷೇತ್ರದ ಪಿಆರ್‌ಒ ಆಗಿದ್ದೇನೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತಿರುಗೇಟು ನೀಡಿದರು.

ರಾಮನಗರ: ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ರವರಿಗೆ ಶಿಕ್ಷಣ ಕ್ಷೇತ್ರದ ಗಂಧ ಗಾಳಿಯೇ ಗೊತ್ತಿಲ್ಲ. ಆದರೆ, ನಾನು ಶಿಕ್ಷಕರ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಹೀಗಾಗಿ ನಾನೇ ಶಿಕ್ಷಣ ಕ್ಷೇತ್ರದ ಪಿಆರ್‌ಒ ಆಗಿದ್ದೇನೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ಸೇರಿದಂತೆ ಹೊರ ರಾಜ್ಯಗಳ ಉದ್ದಿಮೆದಾರರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ನಾನೇ ಪಿಆರ್‌ಒ ಎಂದರೂ ಬೇಸರವಿಲ್ಲ. ಅವರಿಗೆ ತಾಕತ್ತಿದ್ದರೆ ಯಾವುದಾದರು ಶಿಕ್ಷಣ ಸಂಸ್ಥೆಗಳಿಂದ 1 ರುಪಾಯಿ ಪಡೆದಿರುವುದನ್ನು ಸಾಬೀತು ಪಡಿಸಲಿ ಎಂದು ರಂಗನಾಥ್ ರವರಿಗೆ ಸವಾಲು ಹಾಕಿದರು.

ಹೊರ ರಾಜ್ಯದವರಿಗೆ ಶಿಕ್ಷಣ ಸಂಸ್ಥೆ ತೆರೆಯಲು ಸರ್ಕಾರ ಅನುಮತಿ ನೀಡುತ್ತದೆ. ಆ ಶಾಲೆಗಳಲ್ಲಿ ಸ್ಥಳೀಯ ಮಕ್ಕಳು ವ್ಯಾಸಂಗ ಮಾಡುತ್ತಾರೆ. ಆ ಮಕ್ಕಳಿಗೆ ತೊಂದರೆಯಾದಾಗ ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಆ ಮಕ್ಕಳನ್ನು ಕಾಪಾಡುವ ಜವಾಬ್ದಾರಿ ನಮ್ಮದಲ್ಲದೆ ಮತ್ಯಾರದು. ನಾನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನಿಷ್ಠೆಯಾಗಿರುತ್ತೇನೆ. ಉಳಿದುದೆಲ್ಲ ನನಗೆ ನಗಣ್ಯ. ನನ್ನನ್ನು ನಂಬಿರುವ ಶಿಕ್ಷಕರಿಗೆ ನಂಬಿಕೆ ದ್ರೋಹ ಮಾಡಲ್ಲ ಎಂದರು.

ಪಕ್ಷಾಂತರ ಮಾಡಿದರೂ ಮಾರಾಟ ಆಗಿಲ್ಲ:

ಸಾರ್ವಜನಿಕ ಜೀವನದಲ್ಲಿ ನಾನು ಕಪ್ಪು ಚುಕ್ಕೆ ಅಂಟಿಸಿಕೊಂಡವನಲ್ಲ. ಶಿಕ್ಷಕರ ಹಿತ ಕಾಪಾಡುವ ಪ್ರಶ್ನೆ ಬಂದಾಗ ನನ್ನಂತಹ ಹೋರಾಟಗಾರರಿಗೆ ಅಧಿಕಾರಕ್ಕೆ ರಾಜೀನಾಮೆ ಕೊಡುವಂತಹ ತೀರ್ಮಾನ ಅಗತ್ಯವಾಗಿರುತ್ತದೆ. ಆದರೆ, ನಾನೆಂದು ಸ್ವ ಹಿತಾಸಕ್ತಿಗಾಗಿ ಪಕ್ಷಾಂತರ ಮಾಡಿದವನಲ್ಲ. ಪಕ್ಷಾಂತರ ಮಾಡಿದರೂ ಮಾರಾಟ ಆಗಿಲ್ಲ. ವ್ಯಕ್ತಿತ್ವ ಕಳೆದುಕೊಂಡಿಲ್ಲ. ವಿದ್ಯಾರ್ಥಿ ದಿನದಲ್ಲಿದ್ದ ಬದ್ಧತೆಯನ್ನೇ ಇಟ್ಟುಕೊಂಡು ಹೋರಾಟ ನಡೆಸುತ್ತಿದ್ದೇನೆ.ಜೆಡಿಎಸ್ ನಲ್ಲಿ 20 ತಿಂಗಳು, ಬಿಜೆಪಿಯಲ್ಲಿ ಒಂದೂವರೆ ವರ್ಷ ಅಷ್ಟೇ ನಾನು ಅಧಿಕಾರದಲ್ಲಿದ್ದೆ. ಉಳಿದ ಅ‍ವಧಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತಿದ್ದೆ. ಯಾರಿಗೆ ಹೋರಾಟ ಮನೋಭಾವನೆ ಇರುವುದಿಲ್ಲವೊ ಅಂಥವರು ಜಡತ್ವದಿಂದ ಅಲ್ಲಿಯೇ ಉಳಿಯುತ್ತಾರೆ. ನಾನು ಶಾಲಾ ಕಾಲೇಜು ದಿನಗಳಲ್ಲಿಯೇ ಹೋರಾಟ ಮೈಗೂಡಿಸಿಕೊಂಡವನು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿದ್ದೇನೆ. ಅದರಲ್ಲಿ ಹಿಂಜರಿಕೆ ಇಲ್ಲ. ನನ್ನದು ತೆರೆದ ಪುಸ್ತಕ ಎಂದು ಹೇಳಿದರು.

ಮೂವರು ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿ ಸರ್ಕಾರ ಒಂದೇ ಒಂದು ಸಭೆ ನಡೆಸಲಿಲ್ಲ. ಸಂಧಾನದ ಬಾಗಿಲು ಮುಚ್ಚಿದರು. ಇದು ನನಗೆ ಅತೀವ ಬೇಸರ ತರಿಸಿತು. ನನಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳೇ ಮುಖ್ಯವಾಯಿತು. ಹೀಗಾಗಿ ರಾಜೀನಾಮೆಯಂತಹ ಕಠಿಣ ನಿರ್ಧಾರ ಮಾಡಿದೆ. ಒಪಿಎಸ್ ಯೋಜನೆಯನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಆಶ್ವಾಸನೆ ದೊರೆತ ಮೇಲೆಯೇ ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಗೆ ಸೇರ್ಪಡೆಯಾದೆ ಎಂದು ಪುಟ್ಟಣ್ಣ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಂಡರು.

ನಾನು ಬೋಗಸ್ ಮತದಾನದಿಂದ ಗೆದ್ದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ, ಬೇಡ ಅಂದವರು ಯಾರು? ಪ್ರತಿ ಚುನಾವಣೆಯಲ್ಲಿ ಮತದಾರರ ನೋಂದಣಿಗೆ 9 ತಿಂಗಳ ಅವಕಾಶ ಇರುತ್ತಿತ್ತು. ಈ ಉಪಚುನಾವಣೆಗೆ 3 ತಿಂಗಳಿಗೆ ಸೀಮಿತಗೊಳಿಸಿದರು. 9 ತಿಂಗಳು ಕಾಲಾವಕಾಶ ನೀಡಿದ್ದರೆ ಮತದಾರರ ಸಂಖ್ಯೆ ಹೆಚ್ಚಾಗುತ್ತಿತ್ತು. ಇಷ್ಟು ಸಾಮಾನ್ಯ ಜ್ಞಾನ ಕೂಡ ನಾನ್ ಪ್ರಾಕ್ಟಿಸಿಂಗ್ ಅಡ್ವೋಕೇಟ್ ರಂಗನಾಥ್ ಅವರಿಗಿಲ್ಲ ಎಂದು ವ್ಯಂಗ್ಯವಾಡಿದರು.

ಮತದಾರರ ಪಟ್ಟಿಯಲ್ಲಿ 2 ಸಾವಿರ ಮತದಾರರು ಕಡಿಮೆ ಆಗಿರಬಹುದು. ಆದರೂ ನಾನು ಹೆದರುವುದಿಲ್ಲ. ನಾನು ಒಬ್ಬನೇ ಒಬ್ಬ ಮತದಾರನನ್ನು ನೋಂದಣಿ ಮಾಡಿಸುವುದಿಲ್ಲ. ತಾಕತ್ತಿದ್ದರೆ ರಂಗನಾಥರೇ ಮತದಾರರ ನೋಂದಣಿ ಮಾಡಿಸಿ ಚುನಾವಣೆ ನಡೆಸಲಿ ಅದಕ್ಕೂ ನಾನು ರೆಡಿ ಇದ್ದೇನೆ ಎಂದು ಪುಟ್ಟಣ್ಣ ಸವಾಲು ಹಾಕಿದರು.

ಶಿಕ್ಷಕರು ನನ್ನ ಮನೆಯ ಸದಸ್ಯರಿದ್ದಂತೆ. ನನ್ನ ಜೀವನದಲ್ಲಿ ಒಬ್ಬ ಶಿಕ್ಷಕನ ಮೇಲೆ ದೂರು ದಾಖಲಿಸಿ ಕಿರುಕುಳ ನೀಡಿಲ್ಲ. ಮೈತ್ರಿ ಅಭ್ಯರ್ಥಿ ಆರೋಪಿಸಿದಂತೆ ನಾನು ದೂರು ದಾಖಲಿಸಿದ್ದರೆ ಆ ಶಿಕ್ಷಕರು ನನ್ನ ಪರವಾಗಿ ಏಕೆ ಚುನಾವಣೆ ಮಾಡುತ್ತಿದ್ದಾರೆ. ಕಾಪಾಡಿದವರನ್ನು ಬಿಟ್ಟು ನನ್ನೊಂದಿಗೆ ಏಕೆ ಬಂದರು. ಅವರಂತೆ ನಾನು ಶಾಲಾ ಆಡಳಿತ ಮಂಡಳಿಯವರಿಗೆ ಧಮಕಿ ಹಾಕಿ ಮತ ಕೇಳುತ್ತಿಲ್ಲ. ಅವರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ವಕೀಲ ಎಂಬುದನ್ನು ಮರೆತು ಶಿಕ್ಷಕರೊಂದಿಗೆ ಸೌಜನ್ಯದಿಂದ ವರ್ತಿಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆರ್.ಕೆ.ಬೈರಲಿಂಗಯ್ಯ, ಪಟೇಲ್ ಸಿ.ರಾಜು, ಸುನೀಲ್, ಪ್ರದೀಪ್, ವೆಂಕಟಸುಬ್ಬಯ್ಯ ಶೆಟ್ಟಿ, ನಂಜೇಗೌಡ, ಕಾಂಗ್ರೆಸ್ ಮುಖಂಡರಾದ ಎ.ಬಿ.ಚೇತನ್ ಕುಮಾರ್, ಗುರುಪ್ರಸಾದ್ ಇತರರಿದ್ದರು.

ಕೋಟ್ .............

ನಾನು ನಾಲ್ಕು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಸೆನೆಟ್ ನಲ್ಲಿಯೂ ಗೆಲುವು ಸಾಧಿದವನು. ಆದರೆ, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಬೆಂಗಳೂರು ವಕೀಲರ ಸಂಘದಲ್ಲಿ ನಾಲ್ಕೈದು ಬಾರಿ ಸೋತು ಒಂದು ಬಾರಿ ಗೆಲುತ್ತಾರೆ. ಧೈರ್ಯವಿದ್ದರೆ ಮತ್ತೊಮ್ಮೆ ಬಾರ್ ಕೌನ್ಸಿಲಿಂಗ್ ಗೆದ್ದು ತೋರಿಸಲಿ. ನ್ಯಾಯವಾದಿಗಳೇ ಹೀನಾಯವಾಗಿ ಸೋಲಿಸುತ್ತಾರೆಂದರೆ ಅವರ ಬಂಡವಾಳ ಅಲ್ಲಿಯೇ ಗೊತ್ತಾಗುತ್ತದೆ. ಅವರಿಗೆ ಸೋಲೇ ಅರ್ಹತೆ. ಅಷ್ಟಕ್ಕೂ ಅವರು ಶಿಕ್ಷಣ ಕ್ಷೇತ್ರಕ್ಕಾಗಿ ನೀಡಿರುವ ಕೊಡುಗೆ ಏನು?

- ಪುಟ್ಟಣ್ಣ, ಕಾಂಗ್ರೆಸ್ ಅಭ್ಯರ್ಥಿ, ಬೆಂಗಳೂರು ಶಿಕ್ಷಕರ ಕ್ಷೇತ್ರ

9ಕೆಆರ್ ಎಂಎನ್ 1.ಜೆಪಿಜಿ

ಬೆಂಗಳೂರು ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.